ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಪಾದರಕ್ಷೆ ವಿವಾದ ಪುರಾತತ್ವ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿ ಮಹಿಳೆ ಆಕ್ರೋಶ.

 

 

ಬಾಗಲಕೋಟೆ : ಚಾಲುಕ್ಯರ ಕಾಲದ ಐತಿಹಾಸಿಕ ಮಹತ್ವ ಹೊಂದಿರುವ ಬಾದಾಮಿ ಪಟ್ಟಣದ ದೇಗುಲದಲ್ಲಿ ಪಾದರಕ್ಷೆ ಧರಿಸಿ ಪ್ರವೇಶಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾದಾಮಿಯ ಮೇಣಬಸದಿ ಪ್ರದೇಶದಲ್ಲಿರುವ ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡಿದ್ದ ಪ್ರವಾಸಿ ಮಹಿಳೆ, ಪುರಾತತ್ವ ಇಲಾಖೆಯ ಸಿಬ್ಬಂದಿಯಾಗಿರುವ ರೋಷಿನಿ ಮುಸ್ತಾಫಿ ಅವರು ಚಪ್ಪಲಿ ಧರಿಸಿಕೊಂಡೇ ದೇಗುಲದ ಒಳಭಾಗಕ್ಕೆ ತೆರಳಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

ವಿಡಿಯೋದಲ್ಲಿ “ಚಪ್ಪಲಿ ಹಾಕಿಕೊಂಡು ಯಾಕೆ ದೇಗುಲದ ಒಳಗೆ ಹೋಗಿದ್ದೀರಿ? ಕರ್ತವ್ಯದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಕೂಡ ಇರಬೇಕು” ಎಂದು ಪ್ರವಾಸಿ ಮಹಿಳೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವುದು ಕೇಳಿಬಂದಿದೆ.

ಘಟನೆ ನಡೆದ ದೇಗುಲವು ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕವಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ದೇಗುಲಗಳ ಪಾವಿತ್ರ್ಯ ಕಾಪಾಡಬೇಕೆಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಪುರಾತತ್ವ ಸ್ಮಾರಕಗಳ ನಿರ್ವಹಣಾ ನಿಯಮಗಳ ಬಗ್ಗೆ ಸ್ಪಷ್ಟತೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಘಟನೆ ಇದೀಗ ಐತಿಹಾಸಿಕ ಸ್ಮಾರಕಗಳಲ್ಲಿ ಪಾಲಿಸಬೇಕಾದ ಸಂಸ್ಕೃತಿ, ನಿಯಮಗಳು ಮತ್ತು ಸಿಬ್ಬಂದಿಯ ವರ್ತನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Share This Article
Leave a Comment