ಬಾಗಕೋಟೆಯಲ್ಲಿ ಕೋಲಿ ಸಮಾಜಕ್ಕೆ ಐದು ಎಕರೆ ಜಮೀನು ಕೊಡಿ: ಪೂರ್ಣಾವಧಿ ಪರಿಷತ್ ಸದಸ್ಯರನ್ನಾಗಿ ಮಾಡಿ: ಕಾಂಗ್ರೆಸ್ ವರಿಷ್ಠರಿಗೆ ಕಮಕನೂರ್ ಕೋರಿಕೆ..!

 

ಕಲಬುರ್ಗಿ, ಮೇ.೫- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಕೋಲಿ ಸಮಾಜದವರಿಗೆ ಕೊಟ್ಟ ಭರವಸೆಯಂತೆ ಶಿಕ್ಷಣ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕೋಲಿ ಸಮಾಜದ ನೇತಾರ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆಯಂತೆ ನಾನು ಬಾಗಲಕೋಟೆ ಕ್ಷೇತ್ರಕ್ಕೆ ತೆರಳಿ ಪ್ರಚಾರ ಮಾಡಿರುವೆ. ಇಡೀ ಕೋಲಿ ಸಮಾಜದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು, ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕೋಲಿ ಸಮಾಜದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವ ಉದ್ದೇಶದಿಂದ ಮುಖ್ಯಮಂತ್ರಿಗಳು ನನಗೆ ಆ ಕ್ಷೇತ್ರದಲ್ಲಿಯೇ ಪ್ರಚಾರ ಮಾಡಲು ಸೂಚಿಸಿದ್ದರು. ಸ್ವತ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೋಲಿ ಸಮಾಜದ ಹೆಚ್ಚು ಮತದಾರರು ಇರುವ ನಾಯನೇಗಲಿ ಹಾಗೂ ಇನ್ನೊಂದು ಗ್ರಾಮಕ್ಕೆ ಬಂದಿದ್ದರು. ಎರಡು ಗ್ರಾಮಗಳಲ್ಲಿ ಸುಮಾರು ಹತ್ತು ಸಾವಿರ ಕೋಲಿ ಸಮಾಜದವರು ಇದ್ದರು. ಅದೇ ರೀತಿ ಇಡೀ ಬಾಗಲಕೋಟೆ ಕ್ಷೇತ್ರದಲ್ಲಿ ೧೫ ಸಾವಿರ ಮತದಾರರು ಇದ್ದು, ಒಟ್ಟು ೨೫ ಸಾವಿರ ಕೋಲಿ ಸಮಾಜದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ಹಾಲು ಮತದವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಿದರೆ ಕೋಲಿ ಸಮಾಜಕ್ಕೆ ಬಾಗಲಕೋಟೆಯಲ್ಲಿ ಐದು ಎಕರೆ ಜಮೀನು ಕೊಡುವುದಾಗಿ ಘೋಷಣೆ ಮಾಡಿದ್ದರು. ಹೀಗಾಗಿ ಆ ಘೋಷಣೆಯಂತೆ ಮುಖ್ಯಮಂತ್ರಿಗಳು ಐದು ಎಕರೆ ಜಮೀನು ಕೊಡಬೇಕು ಎಂದು ಅವರು ಕೋರಿದರು.

ಚುನಾವಣಾ ಪ್ರಚಾರದಲ್ಲಿಯೂ ಸಹ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೋಲಿ ಸಮಾಜದ ಐದು ರ‍್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಚುನಾವಣೆ ಮುಗಿದ ಬಳಿಕ ಶಿಫಾರಸ್ಸು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಕೂಡಲೇ ಐದು ರ‍್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಕೋರಿದರು.

ಕೋಲಿ ಸಮಾಜದ ಎಸ್‌ಟಿ ಸೇರ್ಪಡೆಗಾಗಿ ಹಾಗೂ ತಳವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣಪತ್ರ ನೀಡಲು ಒತ್ತಾಯಿಸಿ ಹೋರಾಟ ಮಾಡಲಾಗಿದ್ದು, ಹೋರಾಟಗಾರರ ಮೇಲೆ ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.

ನಿಮ್ಮ ರಾಜ್ಯ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಶೀಘ್ರ ಮುಗಿಯಲಿದೆ. ಮತ್ತೆ ನಿಮಗೆ ರಾಜ್ಯ ವಿಧಾನ ಪರಿಷತ್ ಸದಸ್ಯತ್ವ ಸಿಗಲಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಿಪ್ಪಣ್ಣಪ್ಪ ಕಮಕನೂರ್ ಅವರು, ನನಗೆ ಈ ಮೊದಲು ಉಗ್ರಪ್ಪ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಕೇವಲ ಒಂದು ವರ್ಷದ ಅಪೂರ್ಣ ಅವಧಿಗೆ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿತು. ಆ ಅವಧಿ ಮುಗಿದ ನಂತರ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಶಂಕರ್ ಅವರಿಂದ ತೆರವಾದ ರಾಜ್ಯ ವಿಧಾನ ಪರಿಷತ್‌ನ ಎರಡು ವರ್ಷದ ಅವಧಿಯವರೆಗೆ ಅಪೂರ್ಣ ಅವಧಿಯವರೆಗೆ ನಾಮ ನಿರ್ದೇಶನ ಮಾಡಿದರು. ಹೀಗಾಗಿ ಎರಡೂ ಬಾರಿಯೂ ಅಪೂರ್ಣವಾಗಿಯೇ ಕಾರ್ಯನಿರ್ವಹಿಸಿರುವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ಬಾರಿ ಪರಿಷತ್ ಸದಸ್ಯರಾಗಿ ಅಪೂರ್ಣ ಅವಧಿಯವರೆಗೆ ಕಾರ್ಯನಿರ್ವಹಿಸಿದರೂ ಸಹ ಸಮಾಜದ ಬೇಕು, ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಕಲಬುರ್ಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿರುವೆ. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಬೆಂಗಳೂರಿನ ವಿಧಾನಸೌಧದ ಬಳಿ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಈಗಾಗಲೇ ಸ್ಥಳ ಗುರುತಿಸಿದ್ದಾರೆ. ಚೌಡದಾನಪೂರದ ಅಭಿವೃದ್ಧಿಗೂ ಸಹ ನಾನು ಕ್ರಮ ಕೈಗೊಂಡಿದ್ದೇನೆ. ಸಮಾಜದ ಅಭಿವೃದ್ಧಿಗೆ ಅಷ್ಟೇ ಅಲ್ಲ, ಬೇರೆ ಸಮುದಾಯಗಳ ಅಭಿವೃದ್ಧಿಗೂ ಸಹ ನಾನು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿರುವೆ ಎಂದು ಕಮಕನೂರ್ ಅವರು ಹೇಳಿದರು.

ಪೂರ್ತಿ ಆರು ವರ್ಷಗಳವರೆಗೆ ನನಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂಬ ಕೋರಿಕೆ ಮಂಡಿಸಿದ ಅವರು, ಈ ಕುರಿತು ಬೆಂಬಲಿಗರು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮನವಿ ಮಾಡಿದ್ದಾರೆ. ನಾನೂ ಸಹ ಶೀಘ್ರ ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಪೂರ್ಣಾವಧಿ ಪರಿಷತ್ ಸದಸ್ಯರನ್ನಾಗಿಸಲು ಮನವಿ ಮಾಡಿಕೊಳ್ಳುವುದಾಗಿ ಕಮಕನೂರ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಬೈಲಪ್ಪ ನೇದಲಗಿ, ವಿಜಯಕುಮಾರ್ ಹದಗಲ್, ರಮೇಶ್ ನಾಟೀಕಾರ್ ಅವರು ಉಪಸ್ಥಿತರಿದ್ದರು.

Share This Article
Leave a Comment