ಕಲಬುರ್ಗಿ, ಜೂ.೧೮- ಜಿಲ್ಲೆಯ ಆಳಂದ ತಾಲ್ಲೂಕಿನ ಪವನ ವಿದ್ಯುತ್ ಹಾಗೂ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿಯ ಗುತ್ತಿಗೆ ಸಂಸ್ಥೆ ಮೇ. ಭೂಪೈನ್ ಎನರ್ಜಿ ಕಂಪೆನಿ ವಿರುದ್ಧ ಕೇಳಿಬರುತ್ತಿರುವ ಅಕ್ರಮಗಳು, ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲಗಳು ಸೇರಿದಂತೆ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್, ಅವರ ಅಣ್ಣನ ಪುತ್ರ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ಅವರ ರಾಜಕೀಯ ಹಸ್ತಕ್ಷೇಪದ ಕುರಿತು ಸ್ವತಂತ್ರ ತನಿಖೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಸುಭಾಷ್ ಗುತ್ತೇದಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ್ ತಾಲ್ಲೂಕಿನಲ್ಲಿ ಮೇ: ಬ್ಲೂಪೇನ್ ಎನರ್ಜಿ ಸಂಸ್ಥೆಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅವರು ಪವನ ಹಾಗೂ ಸೌರ ವಿದ್ಯುತ್ ಅಭಿವೃದ್ಧಿ ಮತ್ತು ಸಾಗಾಣಿಕೆ ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಆದಾಗ್ಯೂ, ಸಂಸ್ಥೆಯವರು ಸ್ಥಳೀಯ ಶಾಸಕ ಬಿ.ಆರ್. ಪಾಟೀಲ್ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ಅವರ ಅಣತಿಯಂತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅವರ ಮತ್ತು ಅವರ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹಾಘೂ ಅವರ ಹಿಂಬಾಲಕರಿಗೆ ಗರಿಷ್ಠ ಲಾಭವಾಗುವಂತೆ ವರ್ತಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ನಾವು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ವಿರೋಧಿಗಳಿಲ್ಲ. ಆದಾಗ್ಯೂ, ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಮೋಸಗೊಳಿಸುವುದು ಹಾಗೂ ಅವರ ಹಕ್ಕು ಕಸಿದುಕೊಳ್ಳುವುದು ಮತ್ತು ಕೆಲವೇ ರಾಜಕೀಯ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವುದು ಖಂಡನೀಯ. ಕೆಆರ್ಈಡಿಎಲ್ ಸಂಸ್ಥೆಯಿAದ ಒಟ್ಟು ೯೬ ವಿಂಡ್ ಟರ್ಬೈನ್ ಘಟಕಗಳ ಸ್ಥಾಪನೆಗೆ ಅನುಮತಿ ನೀಡಿದ್ದು, ೩೦೩ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ತೆಗೆದುಕೊಂಡ ವಿವರವನ್ನು ಬುಕ್-೧ ಅಡಿಯಲ್ಲಿ ಆರ್ಟಿಕಲ್ ೫(ಇ) (೧) ನಮೂದಿಸುತ್ತಿರುವುದರಿಂದ ಜಮೀನಿನ ಇಸಿಯಲ್ಲಿ ದಾಖಲಾತಿ ಕಾಣುತ್ತದೆ. ಇದರಿಂದ ಬ್ಯಾಂಕುಗಳಿAದ ಕೃಷಿ ಸಾಲ ಪಡೆಯಲು ತೊಂದರೆ, ಬೆಳೆ ವಿಮೆ ಹಾಗೂ ಇತರ ವಿಮಾ ಸೌಲಭ್ಯಗಳು ಸಿಗುವುದುಇಲ್ಲ. ಪಿಎಂಎಫ್ಬಿವೈ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ರೈತರು ವಂಚಿತರಾಗುತ್ತಾರೆ. ಮುಂದೆ ರೈತರು ಜಮೀನಿನ ಮಾರಾಟ ಮತ್ತು ಗುತ್ತಿಗೆ ಹಾಗೂ ಇತರೆ ಯಾವುದೇ ರೀತಿಯ ಜಮೀನು ವ್ಯವಹಾರಕ್ಕೆ ಕಂಪೆನಿಯ ಎನ್ಡಿಸಿ ಪಡೆಯುವುದು ಕಡ್ಡಾಯ. ಹೀಗಾಗಿ ಕೃಷಿಕರು ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಬುಕ್-೪ ಅಡಿಯಲ್ಲಿ ನೊಂದಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ಘಟಕಗಳ ಸ್ಥಾಪನೆಯಲ್ಲಿ ಹಾಗೂ ಭೂಮಿ ಬೆಲೆ ನಿಗದಿಯಲ್ಲಿ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ. ಆಡಳಿತ ಪಕ್ಷದ ಕಾಂಗ್ರೆಸ್ಸಿನವರಿಗೆ ಒಂದು ನೀತಿ, ಬಿಜೆಪಿ ವಿರೋಧ ಪಕ್ಷಗಳಿಗೆ ಇನ್ನೊಂದು ರೀತಿ ಎನ್ನುವಂತೆ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ್ ಮತ್ತು ಪಂಜಾಬ್ ರೈತರ ಕುರಿತು ಶಾಸಕ ಬಿ.ಆರ್. ಪಾಟೀಲ್ ಅವರು ಮಾತನಾಡುತ್ತಾರೆ. ಆದಾಘ್ಯೂ, ನೆರೆಯ ಮಹಾರಾಷ್ಟç ರಾಜ್ಯ ಸರ್ಕಾರ ಕೈಗೊಂಡ ರೈತ ಪರ ನಿರ್ಧಾರದ ಅನುಷ್ಠಾನದ ಕುರಿತು ಮಾತನಾಡುತ್ತಿಲ್ಲ. ಇದು ಶಾಸಕರು ಕಂಪೆನಿಯವರು ನೀಡಿದ ಕಪ್ಪು ಕಾಣಿಕೆಯೇ ಕಾರಣವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶಾಸಕ ಬಿ.ಆರ್. ಪಾಟೀಲ್ ಅವರ ನಿಯಂತ್ರಣದಲ್ಲಿ ಬ್ಲೂಪೈನ್ ಎನರ್ಜಿ ಸಂಸ್ಥೆ ಇದೆ. ಕಂಪೆನಿ ಆನೆ ನಡೆದಿದ್ದೇ ದಾರಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದರೂ ಸಹ ಶಾಸಕರು ಸುಮ್ಮನಿದ್ದಾರೆ. ಅದಕ್ಕೆ ಭೂಸ್ವಾಧೀನದ ಗುತ್ತಿಗೆ ದಲ್ಲಾಳಿಗಳು ಕಾಂಗ್ರೆಸ್ ಮುಖಂಡರು. ಗುತ್ತಿಗೆ ನೌಕರಿಯ ನೇಮಕಾತಿಯಲ್ಲಿ ಶಾಸಕರು ಮತ್ತು ಅವರ ಅಣ್ಣನ ಪುತ್ರನ ಶಿಫಾರಸ್ಸು, ಸಂಸ್ಥೆಯಲ್ಲಿ ಬಳಸುವ ಎಲ್ಲ ಗುತ್ತಿಗೆ ವಾಹನಗಳು ಕಾಂಗ್ರೆಸ್ಸಿನವರಿಗೆ ಹಾಗೂ ಶಾಸಕರ ಬೆಂಬಲಿಗರಿಗೆ ಸೇರಿದ್ದು ಎಂದು ಅವರು ಆರೋಪಿಸಿದರು.
ಆಳಂದ್ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳೂ ಸಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳದೇ ಅಮಾಯಕ ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ತಹಸಿಲ್ದಾರ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಪಿಡಿಓಗಳು, ಉಪ ನೊಂದಣಿ ಅಧಿಕಾರಿಗಳು, ಅರಣ್ಯ, ಪೋಲಿಸ್ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕ ರೈತರು ಅನ್ಯಾಯಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸಿಎಸ್ಆರ್ ಅನುದಾನ ಬಳಕೆಯ ಕುರಿತು ಕಂಪೆನಿಗಳ (ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನೀತಿ) ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಪಕ್ಷಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡುವ ಚಟುವಟಿಕೆಗಳನ್ನು ಸಿಎಸ್ಆರ್ ಚಟುವಟಿಕೆಗಳೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಶಾಸಕರ ಸಂಪರ್ಕದಲ್ಲಿರುವ ಪಿಆರ್ಎಸ್ಡಿ ಫೌಂಡೇಶನ್ಗೆ ಹಣ ವರ್ಗಾಯಿಸಿ ಸಿಆರ್ಆರ್ ಅನುದಾನ ದುರುಪಯೋಗದ ಗುಮಾನಿ ಇದ್ದು, ಸಂಸ್ಥೆ ಕುರಿತು ವರದಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲ ಅಕ್ರಮಗಳ ಕುರಿತು ಭೂಸ್ವಾಧೀನ ಪ್ರಕ್ರಿಯೆಯ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸುವಂತೆ, ರೈತರಿಗೆ ನ್ಯಾಯಸಮ್ಮತ ಹಾಗೂ ಹೆಚ್ಚುವರಿ ಲೀಸ್ ಮೊತ್ತ ನೀಡುವಂತೆ, ರೈತರ ಹಕ್ಕುಗಳಿಗೆ ಧಕ್ಕೆ ತರುವ ಬುಕ್-೧ ನೊಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿ ಬುಕ್-೪ರ ಅಡಿಯಲ್ಲಿ ನೊಂದಣಿಗೆ ಅವಕಾಶ ಮಾಡಿಕೊಡುವಂತೆ, ಮಧ್ಯವರ್ತಿಗಳು ಹಾಗೂ ಏಜೆಂಟರ ಹಸ್ತಕ್ಷೇಪವನ್ನು ಸಂಪೂರ್ಣ ತಡೆಯುವಂತೆ, ಸಿಎಸ್ಆರ್ ನಿಧಿಗಳ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವAತೆ, ಅಕ್ರಮ ಮರಕಡಿತ, ಮಣ್ಣು ಹಾಗೂ ಮರಳು ಗಣಿಗಾರಿಕೆ ಕುರಿತು ತನಿಖೆ ಕೈಗೊಳ್ಳುವಂತೆ, ರೈತರ ಮೇಲಿನ ಪೊಲೀಸ್ ಕಿರುಕುಳ ಹಾಗೂ ದೌರ್ಜನ್ಯವನ್ನು ತಡೆಯುವಂತೆ, ಭೂಸ್ವಾಧೀನ ಮತ್ತು ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಡ್ಡಾಯಗೊಳಿಸುವಂತೆ ಅವರು ಒತ್ತಾಯಿಸಿದರು.
ಆಳಂದ್ ತಾಲ್ಲೂಕಿನ ಜನರ ಹಿತ ಕಾಪಾಡಬೇಕಾದವರು ಕಂಪನಿಗಳ ಪರ ನಿಂತು ರೈತರನ್ನು ಕಡೆಗಣಿಸಿರುವುದು ದುರದೃಷ್ಟಕರ. ರೈತರ ಭೂಮಿ, ಹಕ್ಕು ಹಾಗೂ ಭವಿಷ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಜನರ ವಿಶ್ವಾಸಕ್ಕೆ ದ್ರೋಹ ಮಾಡುವವರ ವಿರುದ್ಧ ಹೋರಾಟ ಮುಂದುವರಿಯಲಿದೆ. ಒಂದು ವಾರದೊಳಗೆ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದಿದ್ದರೆ, ಮುಂದಿನ ಹೋರಾಟದ ಸಂಪೂರ್ಣ ಹೊಣೆಯನ್ನು ಕಂಪೆನಿ ಹಾಗೂ ತಾಲ್ಲೂಕು ಆಡಳಿತವೇ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ್ ಕಂದಗೂಳೆ, ಮಹೇಶ್ ಮುನ್ನೋಳ್ಳಿ, ಅಮೃತ್ ಭೀಮರಾಣಿ, ಹಣಮಂತರಾವ್ ಜವಳಿ ವಕೀಲರು, ನಾಮದೇವ್ ಪೂಜಾರಿ, ಸಿದ್ದುಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.