ಕಲಬುರ್ಗಿ, ಜೂ.೯- ಹತ್ತು ಹಲವು ಸಮಸ್ಯೆಗಳೊಂದಿಗೆ ಕಳೆದ ೮ ತಿಂಗಳಿನಿಂದ ನಗರದ ವಿಮಾನ ನಿಲ್ದಾಣವು ಪ್ರಯಾಣಿಕರ ಪಾಲಿಗೆ ಬಂದ್ ಆಗಿತ್ತು. ಉಡಾನ್ ಯೋಜನೆಯನ್ನು ಕೇಂದ್ರ ಸರ್ಕಾರವು ಮುಂದುವರೆಸದೇ ಇದ್ದುದರಿಂದ ಪ್ರಯಾಣಿಕರ ವಿಮಾನಯಾನ ಸ್ಥಗಿತಗೊಂಡಿತ್ತು. ಆದಾಗ್ಯೂ, ರಾಜ್ಯ ಸರ್ಕಾರದ ಕ್ರಮದಿಂದಾಗಿ ಕಲಬುರ್ಗಿ- ಬೆಂಗಳೂರು ವಿಮಾನ ಯಾನ ಜೂನ್ ೧೦ರಂದು ಬೆಳಿಗ್ಗೆ ಪುನರಾರಂಭಗೊಳ್ಳಲಿದೆ. ಈ ಸಂಬAಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪುನರಾರಂಭೋತ್ಸವದಲ್ಲಿ ಪಾಲ್ಗೊಳ್ಳುವರು.
ಕಲಬುರ್ಗಿ ಮತ್ತು ಬೆಂಗಳೂರು ವಿಮಾನ ಸೇವೆ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ್ ಕಿಲ್ಲಂಪಳ್ಳಿ ಅವರು ಘೋಷಿಸಿದ್ದಾರೆ. ರಾಜ್ಯ ಸರ್ಕಾರವು ಆರ್ಥಿಕ ನೆರವು ವಿಸ್ತರಿಸಿದ ಬೆನ್ನಲ್ಲೇ ಸ್ಟಾರ್ ಏರ್ ಸಂಸ್ಥೆಯು ವಾರದ ಏಳೂ ದಿನಗಳೂ ಈ ಮಾರ್ಗದಲ್ಲಿ ವಿಮಾನ ಯಾನ ಸೇವೆ ನೀಡಲು ಮುಂದೆ ಬಂದಿದೆ. ಜೂನ್ ೧೦ರಿಂದ ವಿಮಾನ ಸೇವೆ ಪುನರಾರಂಭವಾಗಲಿದೆ.
ಎರಡು ನಗರಗಳ ನಡುವೆ ಸ್ಟಾರ್ ಏರ್ ಸಂಸ್ಥೆಯ ೭೬ ಆಸನಗಳ ಸಾಮರ್ಥ್ಯದ ಎಂಬ್ರೇಯರ್ ೧೭೫ (ಇ೧೭೫) ಅತ್ಯಾಧುನಿಕ ವಿಮಾನ ಸಂಚರಿಸಲಿದೆ. ಪ್ರತಿದಿನ ಬೆಳಿಗ್ಗೆ ೬:೩೦ಕ್ಕೆ ಬೆಂಗಳೂರಿನಿAದ ಹೊರಡುವ ವಿಮಾನವು ೭:೪೦ಕ್ಕೆ ನಗರವನ್ನು ತಲುಪಲಿದೆ. ತದನಂತರ ೩೦ ನಿಮಿಷಗಳ ಬಿಡುವಿನ ನಂತರ, ಬೆಳಗ್ಗೆ ೮:೧೦ಕ್ಕೆ ನಗರದಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ. ಈ ಬೆಳಗಿನ ಸಮಯದ ಸೇವೆಯು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ಯ ರಾಜಧಾನಿಗೆ ತೆರಳುವ ಸಾರ್ವಜನಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.
ಕಲಬುರ್ಗಿ ಮತ್ತು ಬೆಂಗಳೂರು ನಡುವೆ ಕೊನೆಯ ವಿಮಾನ ಸಂಚಾರ ೨೦೨೫ರ ಅಕ್ಟೋಬರ್ ೮ರಂದು ಸಂಚರಿಸಿತ್ತು. ಆ ಬಳಿಕ ವಿಮಾನ ನಿಲ್ದಾಣದ ಸೇವೆ ಗಣ್ಯಾತೀತ ಗಣ್ಯರು ಸಂಚರಿಸುವ ಕೇವಲ ಹೆಲಿಕಾಪ್ಟರ್ಗಳು ಮತ್ತು ವಿಶೇಷ ಚಾರ್ಟರ್ಡ್ ವಿಮಾನಗಳಿಗಷ್ಟೇ ಸೀಮಿತವಾಗಿತ್ತು. ಎರಡು ವಾರಗಳ ಹಿಂದಷ್ಟೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ತಾಂತ್ರಿಕ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ವಿಮಾನ ಸಂಚಾರ ಇಲ್ಲದಿದ್ದರೂ ನಿಲ್ದಾಣದ ೩ ಕಿಲೋಮೀಟರ್ ಉದ್ದದ ರನ್ವೇಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸುತ್ತಮುತ್ತಲಿನ ೯ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೀದಿದೀಪಗಳನ್ನು ಅಳವಡಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದಿಂದ ಬೆಳಿಗ್ಗೆ ೫:೩೦ಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಬೆಳಗ್ಗೆ ೮:೧೫ಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೋರಿದ್ದರಿಂದ ಸಂಸ್ಥೆಯು ವಿಮಾನಯಾನ ಪುನರಾರಂಭದ ಮುನ್ನಾ ದಿನದಂದು ಮಂಗಳವಾರ ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೌಕರ್ಯಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ಚಾಲನೆ ನೀಡಿದರು. ಇದರೊಂದಿಗೆ ಪ್ರಯಾಣಿಕರ ಜ್ಞಾನಾರ್ಜನೆಗಾಗಿ ವಿಮಾನ ನಿಲ್ದಾಣದಲ್ಲಿ ಲೈಬ್ರ (ಗ್ರಂಥಾಲಯ)ಸೌಲಭ್ಯವನ್ನು ಕೂಡ ಆರಂಭಿಸಲಾಗುತ್ತಿದೆ.
೨೦೨೦ರಿAದ ೨೦೨೫ರ ಅವಧಿಯಲ್ಲಿ ಈ ಮಾರ್ಗದಲ್ಲಿ ಒಟ್ಟು ೫,೭೯೨ ಬಾರಿ ವಿಮಾನ ಸಂಚಾರ ನಡೆದಿದ್ದು, ೨.೮೩ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸ್ಥಳೀಯರಿಂದ ಮುಂಬೈ, ದೆಹಲಿ, ತಿರುಪತಿ ಹಾಗೂ ಗೋವಾ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಕೇಳಿಬಂದಿದ್ದು, ವಿಮಾನಯಾನ ಸಂಸ್ಥೆಗಳು ಮುಂದೆ ಬಂದರೆ ಆ ಮಾರ್ಗಗಳಲ್ಲೂ ಸೇವೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.