ಅಫಜಲಪುರ, ಜೂ. 9: ಭಾರತ ಸರ್ಕಾರದ ರಾಜ್ಯಪತ್ರ, ಕರ್ನಾಟಕ ಸರ್ಕಾರದ ಆದೇಶಗಳು ಹಾಗೂ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶಗಳಿದ್ದರೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತಳವಾರ ಸಮಾಜದ ಜನರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣ ಪತ್ರಗಳನ್ನು ನೀಡದೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ, ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಹೊಸಮನಿ ಅವರನ್ನು ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, 2020ರ ಫೆಬ್ರವರಿ 20ರಂದು ಕೇಂದ್ರ ಸರ್ಕಾರವು “Naikada/Nayak (including Parivar and Talawar)” ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ರಾಜ್ಯಪತ್ರ ಪ್ರಕಟಿಸಿದೆ. ನಂತರ ಕರ್ನಾಟಕ ಸರ್ಕಾರವೂ ಫೆಬ್ರವರಿ 28, 2020ರಂದು ಸುತ್ತೋಲೆ ಹಾಗೂ ರಾಜ್ಯಪತ್ರ ಹೊರಡಿಸಿ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 38ರ ಅಡಿಯಲ್ಲಿ ಈ ಸಮುದಾಯಗಳನ್ನು ಸೇರಿಸಿದೆ ಎಂದು ಉಲ್ಲೇಖಿಸಲಾಗಿದೆ.
ಇದೇ ರೀತಿ, 2022ರ ಅಕ್ಟೋಬರ್ 29ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೂಲಕ ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿದ್ದ 88(H) ತಳವಾರ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದರೂ ಅಫಜಲಪುರ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ತಳವಾರ ಸಮುದಾಯದ ಜನರಿಗೆ ಎಸ್ಟಿ ಜಾತಿ ಪ್ರಮಾಣ ಪತ್ರಗಳನ್ನು ನೀಡದೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ರಾಜ್ಯದ ಇತರೆ ಭಾಗಗಳಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದ್ದರೂ ಅಫಜಲಪುರ ತಾಲೂಕಿನಲ್ಲಿ ಮಾತ್ರ ನಿರಾಕರಿಸಲಾಗುತ್ತಿದೆ ಎಂದು ಮನವಿದಾರರು ಹೇಳಿದ್ದಾರೆ.
ಜಾತಿ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದಾಗ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಂಚನಾಮೆ ವರದಿಗಳಲ್ಲಿ ತಳವಾರ ಜಾತಿಗೆ ಸೇರಿದವರು ಎಂದು ದೃಢೀಕರಣ ನೀಡಿದ್ದರೂ ಸಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ, ಶಾಲಾ-ಕಾಲೇಜು ಪ್ರವೇಶ, ವಿದ್ಯಾರ್ಥಿವೇತನ, ಉದ್ಯೋಗ ನೇಮಕಾತಿ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಪಡೆಯುವಿಕೆಯಲ್ಲಿ ತೀವ್ರ ತೊಂದರೆ ಉಂಟಾಗಿದೆ ಎಂದು ದೂರಲಾಗಿದೆ.
ಅಫಜಲಪುರ ಗ್ರೇಡ್-2 ತಹಸೀಲ್ದಾರರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಳವಾರ ಸಮಾಜದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನ, ರಾಜ್ಯಪತ್ರಗಳು ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಜಾತಿ ಪ್ರಮಾಣ ಪತ್ರಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ಆರೋಪಿಸಿರುವ ಮನವಿದಾರರು, ತಹಸೀಲ್ದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ತಕ್ಷಣ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ತಳವಾರ ಜಾತಿಗೆ ಸಂಬಂಧಿಸಿದ ರಾಜ್ಯಪತ್ರಗಳು, ಕುಲಶಾಸ್ತ್ರೀಯ ಅಧ್ಯಯನ ವರದಿಗಳು, ಸರ್ಕಾರದ ಆದೇಶಗಳು ಹಾಗೂ ಇತರ ದಾಖಲೆಗಳನ್ನು ಒದಗಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನೈಜ ತಳವಾರ ಸಮುದಾಯದ ಜನರಿಗೆ ವಿಳಂಬವಿಲ್ಲದೆ ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಅಗತ್ಯ ನಿರ್ದೇಶನ ನೀಡುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂತೋಷ್ ತಳವಾರ ಅಂಬಣ್ಣ ನಾಯ್ಕೋಡಿ, ದೇವೇಂದ್ರ ಜಮಾದಾರ್ ಬಸವರಾಜ್ ಚೌಡಾಪುರ್ ಭೀಮ್ರಾಯ್ ತಳವಾರ್ ದತ್ತಪ್ಪ ಗೌರ್ ರವಿ ಗೌರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.