ಹೋರ್ಮುಝ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಂದ “ನೌಕಾಯಾನ ಸೇವೆ” ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಇರಾನ್ ಹೇಳಿದೆ. ಆದರೆ ಇದು ಟೋಲ್ ತೆರಿಗೆ ಅಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಇರಾನ್ ಪ್ರಕಾರ, ಹೋರ್ಮುಝ್ ಜಲಸಂಧಿ, ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಸಮುದ್ರ ಪ್ರದೇಶದ ಪರಿಸರ ರಕ್ಷಣೆ ಹಾಗೂ ನೌಕಾಯಾನ ಭದ್ರತೆಗಾಗಿ ನೀಡಲಾಗುವ ಸೇವೆಗಳ ಹಿನ್ನೆಲೆಯಲ್ಲಿ ಕೆಲವು ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿದೆ.
ಇತ್ತೀಚಿನ ವಾರಗಳಲ್ಲಿ ಹೋರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಇರಾನ್ ಮತ್ತಷ್ಟು ಬಲಪಡಿಸಿರುವುದಾಗಿ ವರದಿಗಳು ತಿಳಿಸಿವೆ. ಕೆಲವು ಹಡಗುಗಳಿಗೆ ಭದ್ರತಾ ಪರಿಶೀಲನೆ, ಮಾರ್ಗ ನಿಯಂತ್ರಣ ಮತ್ತು ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅನುಮತಿ ವ್ಯವಸ್ಥೆಯನ್ನೂ ಜಾರಿಗೆ ತಂದಿದೆ ಎನ್ನಲಾಗಿದೆ.
ಇರಾನ್ ಸ್ಥಾಪಿಸಿರುವ ಹೊಸ ಜಲಸಂಧಿ ಪ್ರಾಧಿಕಾರವು ಹಡಗುಗಳ ಸಂಚಾರ ನಿರ್ವಹಣೆ ಮತ್ತು ಶುಲ್ಕ ಸಂಗ್ರಹಣೆಯನ್ನು ನೋಡಿಕೊಳ್ಳುತ್ತಿದೆ ಎಂದು ವರದಿಗಳು ಹೇಳಿವೆ. ಇದಕ್ಕೆ ಸಂಬಂಧಿಸಿ ಕೆಲವು ಗಲ್ಫ್ ರಾಷ್ಟ್ರಗಳು ಅಂತರರಾಷ್ಟ್ರೀಯ ಸಮುದ್ರ ಸಂಸ್ಥೆಗೆ ಆತಂಕ ವ್ಯಕ್ತಪಡಿಸಿವೆ.
ಜಾಗತಿಕ ತೈಲ ಮತ್ತು ಅನಿಲ ಸಾಗಣೆಯಲ್ಲಿ ಅತ್ಯಂತ ಮಹತ್ವದ ಮಾರ್ಗವಾಗಿರುವ ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದು ವಿಶ್ವದ ಇಂಧನ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುತ್ತಿದೆ.