ಯೋಗದಿಂದ ಏಕಾಗ್ರತೆ, ಮಾನಸಿಕ ಒತ್ತಡ ನಿವಾರಣೆ: ಕರುಣಸಾಗರ್

ಬೀದರ್, ಜೂ.೨೩- ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ವೃದ್ಧಿಯಾಗುತ್ತದೆ ಹಾಗೂ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ರಾಜಕುಮಾರ್ ಕರುಣಸಾಗರ್ ಅವರು ತಿಳಿಸಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯೋಗವು ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನ ಸಾಧಿಸುವ ಸಾಧನವಾಗಿದ್ದು, . ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೨೦೧೪ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿದ ಪ್ರಸ್ತಾವನೆಯ ಫಲವಾಗಿ ಜೂನ್ ೨೧ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಇನ್ನೋರ್ವ ಅತಿಥಿಗಳಾದ ಆಯುರ್ವೇದ ವೈದ್ಯೆ ಡಾ. ಶ್ರೇಯಾ ಮಹೇಂದ್ರಕರ್ ಅವರು ಮಾತನಾಡಿ, ಯೋಗವು ಐದು ಸಾವಿರ ವರ್ಷಗಳ ಪುರಾತನ ಪರಂಪರೆಯಾಗಿದ್ದು, ಪತಂಜಲಿ ಮಹರ್ಷಿಗಳು ಯೋಗಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯೋಗವು ಆರೋಗ್ಯವನ್ನು ಸದೃಢಗೊಳಿಸಿ, ದೇಹದ ಆಲಸ್ಯವನ್ನು ದೂರ ಮಾಡಿ ವ್ಯಕ್ತಿಯನ್ನು ಕ್ರಿಯಾಶೀಲನನ್ನಾಗಿಸುತ್ತದೆ. ಪೌಷ್ಟಿಕ ಆಹಾರ ಸೇವನೆ, ಆರೋಗ್ಯಕರ ಜೀವನಶೈಲಿ ಮತ್ತು ಸಕಾರಾತ್ಮಕ ಚಿಂತನೆಗಳ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನ್ ಶೆಟ್ಟಿ ಅವರು ಮಾತನಾಡಿ, ಅಷ್ಟಾಂಗ ಯೋಗವು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯೋದಯಕ್ಕೂ ಮುನ್ನ ಧ್ಯಾನ, ಆಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸದೃಢತೆ ದೊರೆಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಭಾರತಿ ಕರ್ನಾಟಕ ಉತ್ತರ ಕಾರ್ಯಕಾರಿಣಿ ಸದಸ್ಯ ಬಸವರಾಜ್ ಪಾಟೀಲ್, ಅರ್ಚನಾ ಸಿರಿಗೆರೆ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಂಜನಾ ಸಂತೋಷ್ ಸ್ವಾಗತಿಸಿದರು. ಲಾವಣ್ಯ ನಾಗೇಶ್ ದೇಶಭಕ್ತಿ ಗೀತೆ ಹಾಡಿದರು. ಪರಿಣಿತಾ ಮಹದೇವ್ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಹನುಮಂತ್ ವಂದಿಸಿದರು.

Share This Article
Leave a Comment