ಕಲಬುರ್ಗಿ, ಜೂ.೧೩- ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕಳಪೆ ರಸಗೊಬ್ಬರ ಹಾಗೂ ಕಳಪೆ ಬೀಜ ವಿತರಣೆಯಾಗಿದ್ದು, ಅದನ್ನು ತಡೆಯುವಲ್ಲಿ ವಿಫಲವಾಗಿರುವ ಉಪ ನಿರ್ದೇಶಕರು ಮತ್ತು ಉಪ ನಿರ್ದೇಶಕರು-೨ ಅವರನ್ನು ಕೂಡಲೇ ಅಮಾನತ್ತಿಗೆ ಒಳಪಡಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ತಾಲ್ಲೂಕು ಆಗ್ರೋ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರವು ಪೂರೈಕೆ ಆಗಿಲ್ಲ. ರಸಗೊಬ್ಬರವನ್ನು ಕಳಪೆಮಟ್ಟದಿಂದ ಕೂಡಿದೆ. ಪೊಡ್ಯಾಸ್, ಪಿಡಿಎಂ. ಹಾಗೂ ಇನ್ನಿತರ ರಸಗೊಬ್ಬಗಳನ್ನು ಕಳಪೆ ಮಟ್ಟದಲ್ಲಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚಿನ ರಸ ಗೊಬ್ಬರವನ್ನು ಕಳಪೆ ಮಟ್ಟದಿಂದ ಕುಡಿದ್ದರೂ ಕೂಡ ಜಿಲ್ಲಾಧಿಕಾರಿಗಳಾಗಲಿ, ಕೃಷಿ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಇವತ್ತು ರೈತರಿಗೆ ಶಾಪವಾಗಿ ಪರಿಣಮಿಸಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಿಎಪಿ ರಸಗೊಬ್ಬರವನ್ನು ಪ್ರತಿಯೊಂದಿ ಆಗೋ ಕೇಂದ್ರಗಳಲ್ಲಿ ೧೮೦೦ ರೂಪಾಯಿ ಯುರಿಯಾ ರಸಗೊಬ್ಬರವನ್ನು ೬೦೦ರೂ.ಗಳ ಹೆಚ್ಚಿನ ಹಣವನ್ನು ಆಗೋ ಕೇಂದ್ರದ ಮಾಲೀಕರು ಸುಲಿಗೆ ಮಾಡುತ್ತಿದ್ದರೂ ಕೂಡ ಕೃಷಿ ಅಧಿಕಾರಿಗಳ ಕಣ್ಣಿಗೆ ಕಂಡರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ. ಡಿಎಪಿ ರಸಗೊಬ್ಬರದಲ್ಲಿ ನೈಟ್ರೋಜನ್ ೧೮ರಷ್ಟು ಪಾಸ್ಟೆಟ್ ೪೬ರಷ್ಟು ಇರುತ್ತದೆ. ಕಳಪೆ ರಸ ಗೊಬ್ಬರದಲ್ಲಿ ಈ ಯಾವುದೇ ರೋಗನಿರೋಧಕ ಶಕ್ತಿ ಸಸಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವುದಿಲ್ಲ. ಆದ್ದರಿಂದ ಕಳಪೆ ಮಟ್ಟದ ರಸ ಗೊಬ್ಬರವನ್ನು ಕೂಡಲೇ ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ ಸುಮಾರು ೬ರಿಂದ ೭ ಮಿಕ್ಸಿಂಗ್ ಯುನಿಟ್ ಇದ್ದು. ಈ ಮಿಕ್ಸಿಂಗ್ ಯುನಿಟ್‌ಗಳಲ್ಲಿ ಕಲಬೆರಿಕೆ ರಸಗೊಬ್ಬರ ತಯಾರಿಸುವ ಸಂಭವ ಇದೆ ಎಂದು ಎಚ್ಚರಿಸಿದರು.
ಅಧಿಕಾರಿಗಳು ಮಿಕ್ಸಿಂಗ್ ಯುನಿಟ್ಗಳಿಗೆ ಭೆಟಿ ನೀಡಿ ಅಲ್ಲಿರುವಂತಹ ರಸ ಗೊಬ್ಬರಗಳನ್ನು ಶಾಂಪಲ್ ಡ್ರಾ ಮಾಡಿ ತನಿಖೆ ಮಾಡಬೇಕು. ಇದರ ಜೊತೆಯಾಗಿ ಹತ್ತಿ ಬೀಜಗಳು ಪ್ರತಿಯೊಂದು ಕಂಪೆನಿಯ ಪಾಕೆಟ ಮೇಲೆ ಬಿ.ಟಿ-೧, ಬಿ.ಟಿ.-೨ ಅಂತಹ ನಮೂದಿಸಿ ಪಾಕೆಟ್ ಒಳಗಡೆ ಬಿಟಿ-೩, ಬಿಟಿ-೪ ಕಳಪೆ ಮಟ್ಟದ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಚರ್ಮ ರೋಗ, ಅಸ್ಥಮಾ, ಅಲರ್ಜಿ ಮುಂತಾದ ಕಾಯಿಲೆಗಳು ಬರುತ್ತಿವೆ. ಪಾಕೆಟ್ ಒಳಗಡೆ ಬಿ.ಟಿ-೩, ಬಿ.ಟಿ-೪ ಕಳಪೆ ಮಟ್ಟದ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ತಿಂಗಳುಗಳ ಹಿಂದೆನೆ ಕಳಪೆ ಬೀಜ ಮತ್ತು ಕಳಪೆ ರಸಗೊಬ್ಬರದ ಬಗ್ಗೆ ರೈತ ಸಂಘಟನೆ ವತಿಯಿಂದ ಮನವಿ ಕೊಟ್ಟರು ಕೂಡ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಬೀಜದಲ್ಲಿ ಮೋಸ, ರಸಗೊಬ್ಬರದಲ್ಲಿ ಮೋಸ ಮತ್ತು ಬೆಳೆ ಬಂದ ಮೇಲೆ ದರದಲ್ಲಿ ಮೋಸ. ಇದರ ಜೊತೆ ಜೊತೆ ತೂಕದಲ್ಲಿ ಮೋಸ ಇಷ್ಟೊಂದು ಮೋಸ ಆಗುತ್ತಿದ್ದರೂ ಕೂಡ ನಾವು ಆಯ್ಕೆ ಮಾಡಿದ ಶಾಸಕರಾಗಲಿ, ಸಚಿವರಾಗಲಿ ಇದರ ಬಗ್ಗೆ ಚಕಾರ ಎತ್ತಿಲ್ಲ. ಇದನ್ನು ನಿಗಾ ವಹಿಸಬೇಕಾದ ಕೃಷಿ ಅಧಿಕಾರಿಗಳು, ಉಪ ನಿರ್ದೇಶಕರು ಕಲಬುರ್ಗಿ-೧ ಉಪ ನಿದೇರ್ಶಕರು ಕಲಬುರ್ಗಿ-೨ ಅವರು ಅಕ್ರಮ ತಡೆಯುವಲ್ಲಿ ವಿಫಲವಾಗಿರುತ್ತಾರೆ. ಕೂಡಲೇ ಅಕ್ರಮ ತಡೆಗಟ್ಟಿ, ಉಪ ನಿರ್ದೇಶಕರನ್ನು ಅಮಾನತ್ತಿಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ೯೫೮೩ ಮೆಟ್ರಿಕ್ ಟನ್ ಡಿಎಪಿ, ಟನ್ ಯುರಿಯಾ, ೧೧೯೯೦ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಒಟ್ಟು ೩೮,೩೫೧ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದರೂ ಕೂಡ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ಹರ ಸಾಹಸ ಪಡೆಯುತ್ತಿದ್ದಾರೆ. ಉದಾ: ಸೇಡಂ ತಾಲ್ಲೂಕಿನಲ್ಲಿ ರೈತರು ಚಪ್ಪಲಿಗಳು ಸರದಿ ಸಾಲಿನಲ್ಲಿ ಇಟ್ಟು ರಸಗೊಬ್ಬರಕ್ಕಾಗಿ ಕಾಯುವಂತಹ ಸ್ಥಿತಿ ಬಂದಿದೆ. ಅಫಜಲಪುರ ತಾಲ್ಲೂಕಿನಲ್ಲಿ ಗೊಲ್ಲಾಳೇಶ್ವರ ಆಗೋ ಕೇಂದ್ರದಲ್ಲಿ ರೈತರ ರಸಗೊಬ್ಬರ ಪಡೆಯಲು ಹೋದರೆ ರೈತರ ಮೇಲೆ ಆಕ್ರೋ ಕೇಂದ್ರದ ಮಾಲೀಕರು ಹಲ್ಲೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಡಿಎಪಿ, ಯುರಿಯಾ, ಕಾಂಪ್ಲೆಕ್ಸ್ ರಸಗೊಬ್ಬರ ಲಭ್ಯವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆದರೆ ರೈತರಿಗೆ ಮಾತ್ರ ರಸಗೊಬ್ಬರ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಣಗೌಡ ಪಾಟೀಲ್ ಕಲ್ಲೂರ್, ಬಸವರಾಜ್ ಸಿ. ಕೋರಿ ಮುತ್ತಗಾ, ಜಗದೇವಿ ಆರ್. ಹೆಗಡೆ, ಗುರಣ್ಣಗೌಡ ಸೋಮನಾಥ ಹಳ್ಳಿ, ಶ್ರೀದೇವಿ ಪಾಟೀಲ್ ನೆಲೋಗಿ, ಮಲ್ಲಿಕಾರ್ಜುನ್ ಚನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.