ತೈಲ, ಅಡಿಗೆ ಅನಿಲ ದರ ಹೆಚ್ಚಳ ವಿರೋಧಿಸಿ ಎಸ್‌ಯುಐಸಿ ಪ್ರತಿಭಟನೆ

 

ಕಲಬುರ್ಗಿ, ಜೂ.೧- ಕೇಂದ್ರ ಬಿಜೆಪಿ ಸರ್ಕಾರ ಕಳೆದ ೧೦-೧೨ದಿನಗಳಲ್ಲಿ ೫ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್‌ಯುಸಿಐ ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ, ಈ ಏರಿಕೆಗೆ ತಕ್ಕಂತೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿವೆ ಎಂಬುದಾಗಿ ಕೇಂದ್ರ ಸರ್ಕಾರ ಸಮಾರ್ಥನೆ ನೀಡುತ್ತಿದೆ. ಆದರೆ ಯುದ್ಧ ಆರಂಭವಾಗಿದ್ದು ಫೆಬ್ರವರಿ ೨೮ರಂದು. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಬರುವವರೆಗೆ ದರ ಏರಿಕೆಯನ್ನು ಕಂಪನಿಗಳೇ ತಡೆ ಹಿಡಿದವೇ ಎಂಬುದಕ್ಕೆ ಬಿಜೆಪಿಯೇ ಉತ್ತರಿಸಬೇಕು. ಸಾಲದೆಂಬAತೆ ಅಡುಗೆ ಅನಿಲ, ಸಿಎನ್ಜಿಗಳ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರು, ಹೋಟೆಲ್ ಉದ್ಯಮಿಗಳು, ಅಟೋ ಚಾಲಕರು ಸೇರಿದಂತೆ ಎಲ್ಲರಿಗೂ ಹೊರೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗ ಜಾಗತಿಕ ಮಾರುಕಟ್ಟೆಯ ದರದ ನೆಪ ನೀಡುವ ಕೇಂದ್ರ ಸರ್ಕಾರ, ಕೋವಿಡ್ ಮತ್ತು ನಂತರದ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಕುಸಿತವಾದಾಗ, ಅಥವಾ ರಷ್ಯಾ ದೇಶದಿಂದ ರಿಯಾಯಿತಿ ದರದಲ್ಲಿ ಖರೀದಿ ಮಾಡಿದಾಗ ಅದರ ಪ್ರಯೋಜನವನ್ನು ದೇಶದ ಜನರಿಗೆ ಕೊಡಲಿಲ್ಲ ಏಕೆ? ಬದಲಿಗೆ ಕೇಂದ್ರದ ಅಬಕಾರಿ ಸುಂಕ ಏರಿಕೆ ಮಾಡಲಾಯಿತು. ಕಳೆದ ೧೨ ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ ರೂ. ೪೩ ಲಕ್ಷ ಕೋಟಿಯಷ್ಟು ತೆರಿಗೆಯನ್ನು ಜನರಿಂದ ಸುಲಿಗೆ ಮಾಡಿದೆ ಎಂದು ಅವರು ಕಿಡಿಕಾರಿದರು.

ಪೆಟ್ರೋಲ್, ಡೀಸೆಲ್ ದರದಲ್ಲಿ ಸುಮಾರು ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯೇ ಇದೆ. ತೈಲ ಕಂಪನಿಗಳ ಲಾಭ, ಡೀಲರ್ಗಳ ಕಮಿಷನ್ ಬಿಟ್ಟು ಕೂಡ, ಗ್ರಾಹಕರು ಕೇಂದ್ರದ ತೆರಿಗೆ ರೂ. ೨೦ ಮತ್ತು ರಾಜ್ಯದ ತೆರಿಗೆ ರೂ. ೨೫ನ್ನು ಪಾವತಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಪರಸ್ಪರ ದೂಷಿಸುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಇಂಧನ ಬೆಲೆಗಳು ಹೆಚ್ಚಾದರೆ ಜನರ ಪ್ರಯಾಣ, ಸಾರಿಗೆ ವೆಚ್ಚ ಹೆಚ್ಚಳವಾಗಿ ಒಟ್ಟಾರೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಜನರ ನೈಜ ಆದಾಯ ಕುಸಿಯುತ್ತಲೇ ಇದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತೆರಿಗೆಗಳನ್ನು ಕಡಿತ ಮಾಡಬೇಕು, ಪರ್ಯಾಯ ತೈಲ ಮೂಲಗಳನ್ನು ಹುಡುಕಬೇಕು, ತಮ್ಮ ಸ್ವಾರ್ಥಕ್ಕೆ ಯುದ್ಧ ಹೂಡದಂತೆ ಅಮೆರಿಕಾ -ಇಸ್ರೇಲ್‌ಗಳ ಮೇಲೆ ಜಾಗತಿಕ ಒತ್ತಡ ತರಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ. ವೀರಭದ್ರಪ್ಪ, ಜಿಲ್ಲಾ ಸಮಿತಿಯ ಸದಸ್ಯರಾದ ಕಾ. ವಿ.ನಾಗಮ್ಮಾಳ್ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿಯ ಸೆಕ್ರೆಟೇರಿಯೇಟ್ ಸದಸ್ಯರಾದ ಕಾಮ್ರೇಡ್ ಎಮ್. ಶಶಿಧರ್, ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಇಬ್ರಾಹಿಂಪುರ, ಗಣಪತರಾವ ಮಾನೆ, ಎಸ್.ಎಮ್.ಶರ್ಮಾ, ಜಗನ್ನಾಥ ಎಸ್. ಎಚ್., ಮಹೇಶ ಎಸ್.ಬಿ, ರಾಘವೇಂದ್ರ ಎಮ್. ಜಿ, ರಾಧಾ, ವಿಶಾಲಾಕ್ಷಿ ಪಾಟೀಲ್, ಮಹಾದೇವಿ, ಈಶ್ವರ, ಗೌರಮ್ಮ, ರಮೇಶ ದೇವಕರ್, ದೇವರಾಜ, ಭೀಮು ಆಂದೋಲಾ ಹಾಗೂ ಪಕ್ಷದ ಸದಸ್ಯರು, ಬೆಂಬಲಿಗರು ಮೊದಲಾದವರು ಭಾಗವಹಿಸಿದ್ದರು.

Share This Article
Leave a Comment