ಕಲಬುರ್ಗಿ, ಮೇ.೧೯- ಜಿಲ್ಲೆಯಲ್ಲಿ ಕಬ್ಬಿನ ಬಾಕಿಯನ್ನು ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿದ್ದು, ನಿಯಮಗಳ ಪ್ರಕಾರ ಬಡ್ಡಿ ಸಹಿತ ಬಾಕಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ರಾಜಾಪೂರ್ ಅವರು ಒತ್ತಾಯಿಸಿದರು.
ಮಂಗಳವಾರ ನೂತನ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ಕಬ್ಬಿನ ಹಣ ೩-೪ ತಿಂಗಳು ಆದರು ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡದೇ ಇರುವ ಪ್ರಯುಕ್ತ ಒಂದು ವಾರದೊಳಗೆ ರೈತರ ಕಬ್ಬಿನ ಹಣ ಪಾವತಿ ಮಾಡುವಂತೆ ಕೋರಿದರು.
ಜಿಲ್ಲೆಯ ಎನ್‌ಎಸ್‌ಎಲ್ ಭೂಸನೂರ್ ಮತ್ತು ಸಿದ್ದಸಿರಿ ಇಥೆನಾಲ್ ಕಾರ್ಖಾನೆ, ಚಿಂಚೋಳಿ ಮತ್ತು ಯಾದಗಿರಿ ಜಿಲ್ಲೆಯ ಕೋರಗ್ರೀನ್ ಸಕ್ಕರೆ ಖಾರ್ಖಾನೆ ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ೩-೪ ತಿಂಗಳುಗಳಾದರೂ ಕೂಡ ಕಬ್ಬಿನ ಹಣ ಬಾಕಿ ಕೊಟ್ಟಿರುವುದಿಲ್ಲ. ಕಾನೂನಿನ ಪ್ರಕಾರ ೧೫ ದಿವಸಗಳ ಒಳಗಾಗಿ ರೈತರಿಗೆ ಪುರ್ತಿ ಕಬ್ಬಿನ ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ಸುಮಾರು ೩-೪ ತಿಂಗಳುಗಳಾದರೂ ಕಬ್ಬಿನ ಹಣ ರೈತರಿಗೆ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.
ಅದಕ್ಕಾಗಿ ಎಲ್ಲ ಕಾರ್ಖಾನೆಗಳು ಶೇಕಡಾ ೧೫ರಂತೆ ಬಡ್ಡಿ ಸಮೇತ ಹಣ ಪಾವತಿಸಿಬೇಕು ಮತ್ತು ಒಂದು ವಾರದಲ್ಲಿ ಕಬ್ಬಿನ ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನದಲ್ಲಿ ಜಿಲ್ಲಾಧಿಆರಿಗಳ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರಬಸಪ್ಪಾ ಉಜ್ಜಾ ಹರಸೂರ್, ಬಸವಂತರಾವ್ ಮಾಸ್ಟರ್, ಶಾಂತವೀರ್ ಪಾಟೀಲ್ ದಸ್ತಾಪೂರ್, ಶಾಂತವೀರಪ್ಪ ಹೆಬ್ಬಾಳ್, ಗಿರೀಶಗೌಡ ಇನಾಂದಾರ್, ನರಹರಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.