ಕಲಬುರಗಿ, ಏ.೧೮: ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ್ ಮಸೂದೆ ಸೋಲಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ಬೆಳವಣಿಗೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಡಾ. ಸುಧಾ ಆರ್. ಹಾಲ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣವೇ ಈ ಮಹತ್ವದ ಮಸೂದೆ ಸೋಲಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರನ್ನು ರಾಷ್ಟ್ರ ನಿರ್ಮಾಣದ ಮುಖ್ಯ ಪ್ರವಾಹಕ್ಕೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿಕೊಂಡಿದ್ದರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ತರಲಾಗಿತ್ತು ಎಂದು ತಿಳಿಸಿದರು.
ಆದರೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗೂ ಆಪ್ ಸೇರಿದಂತೆ ವಿರೋಧ ಪಕ್ಷಗಳು ಒಂದಾಗಿ ಈ ಮಸೂದೆಯನ್ನು ತಿರಸ್ಕರಿಸಿದ್ದು, ಮಹಿಳಾ ಸಬಲೀಕರಣದ ವಿರುದ್ಧದ ಅವರ ಮನೋಭಾವವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು. ೨೦೧೧ರ ಜನಗಣತಿ ಆಧಾರದ ಮೇಲೆ ಮಹಿಳೆಯರಿಗೆ ಹೆಚ್ಚುವರಿ ಪ್ರತಿನಿಧಿತ್ವ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವ ಅವಕಾಶ ಕಳೆದುಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿಯೂ ಮಹಿಳೆಯರ ಹಕ್ಕುಗಳ ವಿಷಯದಲ್ಲಿ ನಿರಂತರವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಶಾ ಬಾನೋ ಪ್ರಕರಣದಿಂದ ಹಿಡಿದು ತ್ರಿವಳಿ ತಲಾಖ್ ನಿಷೇಧದವರೆಗೆ ಹಲವು ಸಂದರ್ಭಗಳಲ್ಲಿ ಮಹಿಳೆಯರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಹೇಳಿದರು. ಇದು ಕಾಂಗ್ರೆಸ್ನ ರಾಜಕೀಯ ಧೋರಣೆಯೇ ಆಗಿದೆ ಎಂದು ಅವರು ಕಿಡಿಕಾರಿದರು.
ಮಹಿಳಾ ಸಬಲೀಕರಣದ ವಿಷಯದಲ್ಲಿ ಬಿಜೆಪಿ ಬದ್ಧವಾಗಿದ್ದು, ಭವಿಷ್ಯದಲ್ಲಿಯೂ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಹೆಚ್ಚಿನ ಪಾಲ್ಗೊಳ್ಳುವಿಕೆ ಒದಗಿಸಲು ಪಕ್ಷ ಕಾರ್ಯನಿರ್ವಹಿಸುತ್ತದೆ. ಈ ಹಿನ್ನಡೆ ಭವಿಷ್ಯದ ಗೆಲುವಿಗೆ ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದಮ್ಮ ಪಾಟೀಲ್ ರೇವೂರ್, ಸಾವಿತ್ರಿ ಎಸ್. ಕುಳಗೇರಿ, ಗೌರಿ ಆರ್. ಚಿಚಿಕೋಟಿ, ಸವಿತಾ ಎಸ್. ಪಾಟೀಲ್, ಶೋಭಾ ಎಸ್. ಬಾಗೋಡಿ, ಸಪನಾ ಆರ್. ಮಂಗಲಗಿ, ಜ್ಯೋತಿ ಪಾಟೀಲ್, ನಂದಾ ವಿಜಯಕುಮಾರ್ ಖಾಬಾ, ಸುವರ್ಣಾ ವಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.