ತಳವಾರ ಜಾತಿ ಪ್ರಮಾಣ ಪತ್ರ ಬಿಕ್ಕಟ್ಟು: ಅಫಜಲಪುರದಲ್ಲಿ ಹೋರಾಟ ತೀವ್ರ, ರಸ್ತೆ ತಡೆ ಎಚ್ಚರಿಕೆ

ಬೇಡಿಕೆ ಈಡೇರಿಸದಿದ್ದರೆ ಮಧ್ಯಾಹ್ನ 1.30ಕ್ಕೆ ರಸ್ತೆ ತಡೆ – “ತಹಸೀಲ್ದಾರ ಹಟವೋ, ಸಮಾಜ ಬಜಾವೋ” ಘೋಷಣೆ

ಅಫಜಲಪುರ, ಮಾ. 27: ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳನ್ನು ನೀಡದೇ ತಡೆಹಿಡಿದು ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಅಫಜಲಪುರ ತಹಸೀಲ್ದಾರರ ಕಚೇರಿ ಎದುರು ನಡೆಯುತ್ತಿರುವ ಹೋರಾಟ ಮೂರನೇ ದಿನಕ್ಕೂ ತೀವ್ರಗೊಂಡಿದೆ.

ತಾಲೂಕಿನ ಗ್ರೇಡ್-2 ತಹಸೀಲ್ದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ “ತಹಸೀಲ್ದಾರ ಹಟವೋ – ತಳವಾರ ಸಮಾಜ ಬಜಾವೋ” ಎಂಬ ಘೋಷಣೆಯಡಿ ಮಾರ್ಚ್ 25ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾದ ಧರಣಿ, ಹಗಲು-ರಾತ್ರಿ ನಿರಂತರವಾಗಿ ಮುಂದುವರಿದಿದೆ.

ಇದೀಗ ಎರಡು ದಿನಗಳು ಕಳೆದರೂ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದರಿಂದ ಪ್ರತಿಭಟನಾಕಾರರಲ್ಲಿ ಅಸಮಾಧಾನ ಹೆಚ್ಚಾಗಿದೆ. ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದು, ಮಾರ್ಚ್ 27ರಂದು ಮಧ್ಯಾಹ್ನ 12.30ರವರೆಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಮಧ್ಯಾಹ್ನ 1.30ಕ್ಕೆ ಮುಖ್ಯ ರಸ್ತೆಯನ್ನು ತಡೆದು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಅದಕ್ಕೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ತಹಸೀಲ್ದಾರರು ಹೊಣೆಗಾರರಾಗಿರುತ್ತಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸರ್ಕಾರವು ತಕ್ಷಣ ಸಮಸ್ಯೆಯನ್ನು ಪರಿಹರಿಸಿ ತಳವಾರ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸಂಘವು ಆಗ್ರಹಿಸಿದೆ.

Share This Article
Leave a Comment