ಬೀದರ್, ಜೂ.೨೨- ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಲಕ್ಷಾಂತರ ರೂ.ಗಳ ಹಣ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜುಕುಮಾರ್ ಬಳಿ ೧ ಲಕ್ಷ ನಗದು ಮತ್ತು ೧ ಲಕ್ಷ ಮೊತ್ತದ ಚೆಕ್ ಪತ್ತೆಯಾಗಿದೆ. ಈ ವೇಳೆ ಹಣದ ಮೂಲದ ಬಗ್ಗೆ ಉಪಲೋಕಾಯುಕ್ತರು ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಬಳಿ ಇಷ್ಟೊಂದು ಹಣ ಹೇಗೆ ಬಂತು ಎಂದು ಬಿ. ವೀರಪ್ಪ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯೊಳಗೆ ಹಣದ ವ್ಯವಹಾರ ನಡೆದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಹಣದ ಬಗ್ಗೆ ಮಾಹಿತಿ ಕೇಳಿದಾಗ ಲ್ಯಾಬ್ ಟೆಕ್ನಿಶಿಯನ್ ಸಂಜುಕುಮಾರ್ ಸಮರ್ಪಕ ಉತ್ತರ ನೀಡದೆ ತಡಬಡಾಯಿಸಿದ್ದಾನೆ. ಇದರಿಂದ ಅನುಮಾನ ಮತ್ತಷ್ಟು ಗಾಢವಾಗಿದೆ. ಬಳಿಕ ಪತ್ತೆಯಾದ ಹಣ ಮತ್ತು ಚೆಕ್ನ್ನು ಜಪ್ತಿ ಮಾಡಲು ಉಪಲೋಕಾಯುಕ್ತರು ಸೂಚಿಸಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಮೋಟೋ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಣದ ಮೂಲ ಏನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿನ ದಿಂಬು, ಬೆಡ್ ಅವ್ಯವಸ್ಥೆ ಕಂಡು ನ್ಯಾ.ವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ಹಣ ಪತ್ತೆ ಆಗಿದೆ.
ದಿಂಬು, ಬೆಡ್ ನೋಡಿದರೆ ಜೈಲಿನಲ್ಲೂ ಈ ರೀತಿ ಇರುವುದು. ಏ ಡಾಕ್ಟರ್ರೆ ಇಂತಹ ಬೆಡ್ ಮೇಲೆ ನೀವು ಮಲಗುತ್ತೀರಾ ಕೋಟಿ ಕೋಟಿ ಹಣವನ್ನು ಏನು ಮಾಡುತ್ತಿದ್ದೀರಿ. ೬ ಅಂತಸ್ತಿನ ಕಟ್ಟಡದಲ್ಲಿ ಬೆಡ್ ಇಲ್ಲ, ನೀರಿಲ್ಲಾ ಅಂದ್ರೆ ಹೇಗೆ? ರೋಗಿಗಳ ಸಂಬAಧಿಕರಿಗೆ ಆಸನ ವ್ಯವಸ್ಥೆ ಕೂಡ ಇಲ್ಲ. ಹೇಗೆ ಆಸ್ಪತ್ರೆ ನಡೆಸುತ್ತಿದ್ದೀರಿ ಎಂದು ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ, ಡಿಸ್ಟ್ರಿಕ್ ಸರ್ಜನ್ ಬಾಳಿಗೆ ತರಾಟೆ ತೆಗೆದುಕೊಂಡರು. ವಾರಕ್ಕೊಮ್ಮೆ ಇಲ್ಲಿ ವಿಸಿಟ್ ಮಾಡಿದರೆ ಮಾತ್ರ ವ್ಯವಸ್ಥೆ ಸುಧಾರಣೆ ಆಗುತ್ತೆ ಎಂದರು.
ನಗರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕ ಸೇವೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿದರು. ಇನ್ನು ಉಪ ಲೋಕಾಯುಕ್ತ ತಂಡ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ಅಲ್ಲಿನ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಅಸ್ವಚ್ಛತೆ ಹಾಗೂ ಅವ್ಯವಸ್ಥೆ ಕಂಡು ಬಂದ ಹಿನ್ನೆಲೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು.
ಬಳಿಕ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಹೋಟೆಲ್‌ಗಳಲ್ಲಿ ಅಗತ್ಯ ಮಟ್ಟದ ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಗರಂ ಆದ ತಂಡ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.