ಯಡ್ರಾಮಿ, ಜೂ.22: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಯಡ್ರಾಮಿ ಠಾಣೆಯ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಗುರುವಾರ 20 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ನಂತರ ಆರೋಪಿಗಳನ್ನು ಸಮಗ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ನಡುವೆ ಶುಕ್ರವಾರ ಆರೋಪಿತರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಶನಿವಾರ ಲೋಕಾಯುಕ್ತ ಪರ ವಕೀಲರು ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾದ ಮಂಡಿಸಿದ್ದರು.
ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎಲ್. ಲಕ್ಷ್ಮಿನಾರಾಯಣ ಅವರು ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಆರೋಪಿತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.
ಲೋಕಾಯುಕ್ತ ಪರವಾಗಿ ಎಪಿಪಿ ಎಸ್.ಎಸ್. ಚಾಂದ್ ಕೌಟೆ ವಾದ ಮಂಡಿಸಿದರೆ, ಆರೋಪಿತರ ಪರವಾಗಿ ವಕೀಲ ಬಾಬುರಾವ್ ವಾದಿಸಿದರು.
ನ್ಯಾಯಾಲಯದ ಆದೇಶದೊಂದಿಗೆ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಸದ್ಯ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.