ಬಾಲಕರ ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿ* *20 ವಿದ್ಯಾರ್ಥಿಗಳು ಅಸ್ವಸ್ಥ, ಪರಿಸ್ಥಿತಿ ನಿಯಂತ್ರಣದಲ್ಲಿ*

 

 

ಕಲಬುರಗಿ,ಜೂನ್.17- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದಲ್ಲಿ (ಹಳೆಯ ವಿಶ್ವವಿದ್ಯಾಲಯ) ಜೂನ್ 15 ರಂದು ಬೆಳಿಗ್ಗೆ 8:30ರ ಸುಮಾರಿಗೆ ವಿದ್ಯಾರ್ಥಿಗಳು ಚಹಾ ಸೇವಿಸುವ ಸಮಯದಲ್ಲಿ ನೀರು ಕುಡಿಯಲು ಹೋದಾಗ ನೀರಿನಲ್ಲಿ ದುರ್ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡು ವಿದ್ಯಾರ್ಥಿಗಳು ಫಿಲ್ಟರ್ ಟ್ಯಾಂಕ್ ಪರಿಶೀಲಿಸಿದಾಗ ಎರಡು ಸತ್ತ ಹಲ್ಲಿಗಳು ಬಿದ್ದಿರುವುದು ಕಂಡುಬಂದಿದೆ.

ಈ ನೀರನ್ನು ಕುಡಿದಿದ್ದ ಕೆಲವು ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ, ಅಸ್ವಸ್ಥರಾಗಿದ್ದ 20 ವಿದ್ಯಾರ್ಥಿಗಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳನ್ನು ಒಳರೋಗಿ ವಿಭಾಗದಲ್ಲಿ ಹಾಗೂ 18 ವಿದ್ಯಾರ್ಥಿಗಳನ್ನು ಹೊರರೋಗಿ ವಿಭಾಗದಲ್ಲಿ ಉಪಚರಿಸಲಾಗಿದ್ದು, ಎಲ್ಲರೂ ಗುಣಮುಖರಾದ ನಂತರ ಅಂದೇ ಸಾಯಂಕಾಲ ಡಿಸ್ಚಾರ್ಜ್ ಮಾಡಲಾಗಿದೆ.

 

ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.ನೀರು ಕುಡಿದು ಸದ್ಯ ವಸತಿ ನಿಲಯದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಅವರು ತಿಳಿಸಿದ್ದಾರೆ.

 

*ಆರೋಗ್ಯ ಇಲಾಖೆಯಿಂದ ಕೈಗೊಂಡ ಕ್ರಮಗಳು:*- ಬಾಧಿತ ಎಲ್ಲ ವಿದ್ಯಾರ್ಥಿಗಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ವಸತಿ ನಿಲಯದ ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲದೆ ಸದ್ಯಕ್ಕೆ ಪರ್ಯಾಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ನಂದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳಿಗಾಗಿ ಆರೋಗ್ಯ ಸಿಬ್ಬಂದಿಗಳನ್ನು ವಸತಿ ನಿಲಯಕ್ಕೆ ನಿಯೋಜಿಸಲಾಗಿದೆ.

 

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ವಸತಿ ನಿಲಯದ ಎಲ್ಲಾ ಕಚ್ಚಾ ಮತ್ತು ಒಣ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಕಲಬುರಗಿಯ ಫುಡ್ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

 

ಇಲಾಖೆಯ ವತಿಯಿಂದ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ನೈರ್ಮಲ್ಯದ ( Personal Hygiene ) ಬಗ್ಗೆ ಅರಿವು ಮೂಡಿಸಲಾಗಿದೆ. ಇದರೊಂದಿಗೆ, ನಿಲಯದ ಎಲ್ಲಾ ನೀರಿನ ಟ್ಯಾಂಕ್‌ಗಳನ್ನು ತೊಳೆದು ಕ್ಲೋರಿನೇಷನ್ ಮಾಡಿಸಲಾಗಿದೆ.

ವಸತಿ ನಿಲಯದಲ್ಲಿ ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.

Share This Article
Leave a Comment