ಕಲಬುರ್ಗಿ, ಜೂ.೧೬- ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣ ಒಂದರಲ್ಲಿಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಜೂನ್ ೧೮ರಂದು ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ವಿಚಾರ ಸಂಕಿರಣದ ಕರಪತ್ರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಮಾತನಾಡಿ, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ವಿಶಿಷ್ಟ ಸಾಹಿತ್ಯಿಕ ಭಾಷೆ ಮತ್ತು ಅಭಿವ್ಯಕ್ತಿಯನ್ನು ರೂಪಿಸಿಕೊಂಡು ಇಂದಿನ ಜಾಗತಿಕ ಪ್ರಸ್ತುತತೆಯನ್ನು ಉಳಿಸಿಕೊಂಡು ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿದ್ದಾರೆ ಎಂದರು.
ಕರ್ನಾಟಕ ರಾಜ್ಯವು ನಮ್ಮ ದೇಶಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಸಾಹಿತಿಗಳನ್ನು ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಮಹಾನ್ ಸಾಧಕರು ಇಂದಿನ ಆಧುನಿಕತೆಯ ವಿವಿಧ ಪ್ರಭಾವಗಳಿಗೆ ಸೃಜನಾತ್ಮಕವಾಗಿ ಸ್ಪಂದಿಸಿ, ನಮ್ಮ ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಸಮರ್ಥವಾಗಿ ನಿರ್ವಹಿಸಿ, ತಮ್ಮ ವಿಶಿಷ್ಟ ಸಾಹಿತ್ಯಿದ ಭಾಷೆ, ಬರವಣಿಗೆ ಹಾಗೂ ಅಭಿವ್ಯಕ್ತಿಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಂಡು ಜಾಗತಿಕ ಮಟ್ಟದಲ್ಲಿಯೂ ಸಹ ಇಂದಿನ ಪ್ರಸ್ತುತತೆಯನ್ನು ಕಾಯ್ದುಕೊಂಡಿದ್ದಾರೆ” ಎಂದು ಅವರು ಹೇಳಿದರು
ಪ್ರೊ. ಬಸವರಾಜ್ ಡೋಣೂರ್ ಅವರು ಮಾತನಾಡಿ, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಭಾರತೀಯ ಸಾಹಿತ್ಯದ ಬೆಳವಣಿಗೆಗೆ ಹೊಸ ಸಾಹಿತ್ಯಿದ ತಂತ್ರಗಳು, ತಾತ್ವಿಕ ಚಿಂತನೆಗಳು ಹಾಗೂ ಸಾಂಸ್ಕೃತಿಕ ಬೇರುಗಳನ್ನೊಳಗೊಂಡ ಕಲಾತ್ಮಕ ಅಭಿವ್ಯಕ್ತಿಗಳನ್ನು ನೀಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ವಿಚಾರ ಸಂಕಿರಣದಲ್ಲಿ ಜ್ಞಾನಪೀಠ ಸಾಹಿತ್ಯದ ಪರಂಪರೆ, ವಸಹಾತುಶಾಹಿ ಮತ್ತು ವಸಹಾತುಶಾಹಿ ನಂತರದ ಇಂದಿನ ಆಧುನಿಕತೆಗೆ ಅವರು ನೀಡಿದ ಪ್ರತಿಕ್ರಿಯೆಗಳು, ಅವರ ಬರವಣಿಗೆಗಳು, ದೇಶದ ಜಾನಪದ ಮತ್ತು ಸ್ಥಳೀಯ ಭಾಷಾ ಜ್ಞಾನ ಪರಂಪರೆಗಳ ಬಳಕೆ ಹಾಗೂ ಇಂದಿನ ಸಮಕಾಲೀನ ಭಾರತೀಯ ಸಾಹಿತ್ಯದ ಮೇಲೆ ಬೀರಿದ ಪ್ರಭಾವಗಳು ಸೇರಿದಂತೆ ಅನೇಕ ಜ್ಞಾನಪೀಠ ಸಾಹಿತ್ಯದ ಕುರಿತು ಇದು ಚರ್ಚೆಯ ವೇದಿಕೆಯಾಗಲಿದೆ. ಇದರಿಂದ ಅಂತರಶಿಸ್ತೀಯ ಸಂವಾದಗಳು ಉತ್ತೇಜನಗೊಂಡು ಕನ್ನಡ ಹಾಗೂ ಭಾರತೀಯ ಸಾಹಿತ್ಯ ಸಂಶೋಧನೆಗೆ ಹೊಸ ಆಯಾಮಗಳಿಗೆ ಇದೊಂದು ದಿಕ್ಸೂಚಿಯಾಗಲಿದೆ ಅವರು ಅವರು ತಿಳಿಸಿದರು.
ಪ್ರೊ. ವಿಕ್ರಮ್ ವಿಸಾಜಿ ಅವರು ಮಾತನಾಡಿ, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ಸೃಜನಶೀಲ ಪ್ರತಿಭೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವತೆಗಳೊಂದಿಗೆ ಬದ್ಧತೆಯ ಮೂಲಕ ಸಾಹಿತ್ಯದ ಪರಂಪರೆಯನ್ನು ಹೊಸ ಆಯಾಮಗಳಿಗೆ ಕೊಂಡೊಯ್ದು, ಹೊಸ ಸಾಹಿತ್ಯಿದ ಅಭಿವ್ಯಕ್ತಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದರು. ಈ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು ಹಾಗೂ ಪ್ರತಿನಿಧಿಗಳು ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಪ್ರಕಾಶ್ ಬಾಳಿಕಾಯಿ (೮೨೧೭೮೧೭೦೪೫) ಹಾಗೂ ಡಾ. ಆಶಿಷ್ ಬೆಳುಂಕರ (೯೪೪೯೩೨೭೦೪೨) ಅವರನ್ನು ಸಂಪರ್ಕಿಸಬಹುದಾಗಿದೆ.