ಕಲಬುರ್ಗಿ, ಜೂ.೧೩- ಶೋಷಿತ ಸಮುದಾಯಗಳ ಮೇಲೆ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿ ಜುಲೈ ೩೦ರಂದು ಮಧ್ಯಾಹ್ನ ೧೨ ಗಂಟೆಗೆ ಬೆಂಗಳೂಇನ ಫ್ರೀಡಮ್ ಪಾರ್ಕ್ನಲ್ಲಿ ದಲಿತರ ಸಮಗ್ರ ಸಬಲೀಕರಣಕ್ಕೆ ಅನಿರ್ಧಿಷ್ಟ ಪ್ರತಿಭಟನಾ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ವಿರೋಧಿ ಬಿಜೆಪಿ ಅಧಿಕಾರದಿಂದ ತೊಲಗಿಸುವ ಸಲುವಾಗಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್ನ್ನು ಬೆಂಬಲಿಸುವ ಮೂಲಕ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿರುವುದನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರ ಹಂಚಿಕೆಯಲ್ಲಿ ಪಾಲುದಾರರನ್ನಾಗಿಸಿಕೊಳ್ಳಬೇಕು. ಹಾಗೆಯೇಣ ಕಾಂಗ್ರೆಸ್ ಸರ್ಕಾರ ಹಲವು ದಲಿತಪರ ನೀತಿ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಅವುಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.
ದಲಿತರ ಆರ್ಥಿಕ-ಸಾಮಾಜಿಕ ಸಬಲೀಕರಣಕ್ಕೆ ಸರ್ಕಾರ ವಿಶೇಷ ಘಟಕ ಯೋಜನೆ (ಎಸ್ಸಿಎಸ್ಪಿ) (ಟಿಎಸ್ಪಿ)ಯನ್ನು ಕಾಯ್ದೆ ಮೂಲಕ ೨೦೧೩ರಂದು ಜಾರಿಗೆ ತಂದು ಸುಮಾರು ೩ ಲಕ್ಷಕ್ಕೂ ಮೇಲ್ಪಟ್ಟು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಒದಗಿಸಿದೆ. ಆದರೆ ಈ ಅನುದಾನದಿಂದ ಎಷ್ಟು ಪರಿಶಿಷ್ಟರ ಕುಟುಂಬಗಳ ಫಲಾನುಭವಿಗಳು ಬಡತನ ರೇಖೆಯಿಂದ ಹೊರಬಂದಿವೆ ಎಂಬುದರ ಬಗ್ಗೆ ಅಧಿಕೃತ ಅಂಕಿ ಅಂಶಗಳಿಲ್ಲ ಈ ವಿಶೇಷ ಘಟಕ ಯೋಜನೆ ಹಣವನ್ನು ಗ್ಯಾರಂಟಿಗಳ ಮೂಲಕ ಹಂಚಿದ್ದೇವೆ ಎಂದು ಸಬೂಬು ನೀಡುತ್ತಿರುವುದು ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಭೂಮಿ, ವಸತಿ, ಸರ್ಕಾರಿ ಉದ್ಯೋಗ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ಕಡ್ಡಾಯ ಶಿಕ್ಷಣ ಮುಂತಾದವು ನೆನೆಗುದಿಗೆ ಬಿದ್ದಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷ ಘಟಕ ಯೋಜನೆ ಹಣವನ್ನು ನಿಯಮಬಾಹಿರವಾಗಿ, ಸೆಕ್ಷನ್ ೨೪ರ ಕಾಯ್ದೆ ಉಲ್ಲಂಘಿಸಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕೆ ನೀಡಿರುವ ೨೦೦ ಕೋಟಿ ಅಧಿಕ ಹಣವನ್ನು ಮರು ವಸೂಲಿ ಮಾಡಬೇಕು, ಈ ಹಣವನ್ನು ಬಿಡುಗಡೆಗೊಳಿಸಿರುವ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕು. ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿಗೊಳಿಸಬೇಕು. ದಲಿತರ ಸಬಲೀಕರಣಕ್ಕೆ ಕಾಯ್ದಿರಿಸುವ ವಿಶೇಷ ಘಟಕ ಯೋಜನೆ ಹಣವನ್ನು ಆದ್ಯತೆ ಮೇಲೆ ವಯಕ್ತಿಕ ಆಸ್ತಿ ಸೃಜನೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಶೇಷ ಘಟಕ ಯೋಜನೆ ಕಾಯ್ದೆ ಸೆಕ್ಷನ್ ೭(ಸಿ)ತಿದ್ದುಪಡಿ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ದಲಿತ ವಿರೋಧಿ ಧೋರಣೆ ಅನುಸರಿಸುತ್ತಿರುವ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಬದಲಾಯಿಸಿ ದಲಿತ ಪದ ಕಾಳಜಿಯುಳ್ಳ ಸಂವೇದನಾಶೀಲ ಅಧಿಕಾರಿಗಳನ್ನು ನೇಮಿಸಬೇಕು. ದಲಿತ ಹಿಂದುಳಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಶಿಕ್ಷಣ ಸಮುಚ್ಚಯ (ಹಾಸ್ಟೆಲ್ ಕ್ಯಾಂಪಸ್) ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.
ನೆನೆಗುದಿಗೆ ಬಿದ್ದಿರುವ ಭೂ ಒಡೆತನ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ಅನುದಾನ ಒದಗಿಸಿ ಕೂಡಲೇ ನಿಗಮದ ಕಾಯಾ ಆರಂಭಿಸಬೇಕು. ಪರಿಶಿಷ್ಟರ ಭೂರಹಿತ ಪ್ರತಿ ಕುಟುಂಬಕ್ಕೆ ಹಾಗೂ ಭೂ ಹೀನ ಕೃಷಿ ಕಾರ್ಮಿಕರಿಗೆ ಕನಿಷ್ಟ ೨ ಎಕರೆ ಭೂ ಒದಗಿಸಬೇಕು. ಇದಕ್ಕೆ ಪೂರಕವಾಗಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಬೇಕು. ಅರಣ್ಯ ವಾಸಿಗ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ಭೂಸುಧಾರಣೆ ಕಾಯ್ದೆಯನ್ವಯ ಪರಿಶಿಷ್ಟರಿಗೆ ಶೇಕಡಾ ೫೦ರಷ್ಟು ಭೂ ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.
ಭೂ ಪರಭಾರೆ ನಿಷೇದ ಕಾಯ್ದೆ(೧೯೭೮)ಯಿಂದ ಪರಿಶಿಷ್ಟರಿಗೆ ಭೂಮಿ ಮರು ಮಂಜೂರು ಮಾಡಲು ಸಾಧ್ಯವಾಗಿದೆ. ಆದರೆ ಜಾತಿವಾದಿ ಅಧಿಕಾರಿಗಳ, ನ್ಯಾಯಲಯಗಳ ತೀರ್ಪು, ಮಧ್ಯವರ್ತಿಗಳ ಕುಮ್ಮಕಿನಿಂದಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಹಲ್ಲು ಕಿತ್ತ ಹಾವಿನಂತಾಗಿದೆ. ಸರ್ಕಾರ ವಿಶೇಷ ಕಾಳಜಿ ವಹಿಸಿ ಪಿಟಿಸಿಎಲ್ ಕಾಯ್ದೆಗೆ ವಿರುದ್ಧವಾಗಿ ಬಂದಿರುವ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪರಿಶಿಷ್ಟರ ಭೂ ಹಕ್ಕನ್ನು ರಕ್ಷಿಸಬೇಕು. ತೋಟಿ/ಇನಾಂತಿ/ನೀರಗAಟಿ ಜಮೀನುಗಳನ್ನು ಮರು ಮಂಜೂರು ಮಾಡಬೇಕು. ರಾಜ್ಯದಲ್ಲಿ ವಸತಿಹೀನ ಪರಿಶಿಷ್ಟರ ಸಮೀಕ್ಷೆಯಾಗಬೇಕು. ಕೊಳಗೇರಿ ಹಾಗು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಹಾಗೂ ಬಡ ವಸತಿಹೀನರಿಗೂ ವಸತಿ ಯೋಜನೆ ಮೂಲಕ ಘನತೆಯಿಂದ ವಾಸಿಸುವ ಬದುಕು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರ ಈಗಾಗಲೇ ಸಾರ್ವಜನಿಕ ಹಣದ ಮೂಲಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಆರ್ಥಿಕ ಮತ್ತು ಸಾಮಾಜಿಕ ಜಾತಿ ಜನಗಣತಿ ವರದಿಯನ್ನು ಕೂಡಲೆ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು. ಸಂವಿಧಾನ ವಿರೋಧಿ ಹಾಗೂ ಶೋಷಿತ ಸಮುದಾಯಗಳ ವೋಟಿನ ಹಕ್ಕನ್ನು ಕಸಿಯುವ ಎಸ್ಐಆರ್ ರದ್ದುಗೊಳಿಸಬೇಕು. ಸರ್ಕಾರ ಖುದ್ದು ಮತದಾರರ ಪರವಾಗಿ ಅಗತ್ಯ ದಾಖಲೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ರಚಿಸಿರುವ ಡಿ.ಸಿ.ಆರ್.ಇ. ಪೊಲೀಸ್ ಠಾಣೆಗಳಿಗೆ ಕರ್ತವ್ಯಬದ್ದ ಅಧಿಕಾರಿ, ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಾಗ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಸಂವಿಧಾನ ವಿರೋಧಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಸಾಮಾನ್ಯ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಯೋಜನೆ ರೂಪಿಸಬೇಕು. ಪರಿಶಿಷ್ಟರ ಹಾಗೂ ಹಿಂದುಳಿದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಮಂಡಿಸುವ ಮುಂದಿನ ಬಜೆಟ್ನಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಹಣ ಕಾಯ್ದಿರಿಸಲು ವಿಶೇಷ ಘಟಕ ಯೋಜನೆ ಕಾಯ್ದೆ ರೂಪಿಸಬೇಕು. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಜಿಬಿಎ) ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಕ ವಿಲೇವಾರಿಯಲ್ಲಿ ಪರಿಶಿಷ್ಟರಿಗೆ ಹೆಚ್ಚಿನ ಆದ್ಯತೆಯನ್ನು, ಕಾಮಗಾರಿಗಳನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮಣ್ಣ ಕಲ್ಲದೇವನಹಳ್ಳಿ, ಸಂಜುಕುಮಾರ್ ಕಂಬಾಗಿ, ಗೋಪಾಲ್ ರಾಂಪುರೆ, ಬಾಬುರಾವ್ ಶೆಳ್ಳಗಿ, ಅರ್ಜುನ್ ಗೊಬ್ಬೂರ್ ಮುಂತಾದವರು ಉಪಸ್ಥಿತರಿದ್ದರು.