ರಹೀಂಖಾನರಿಗೆ ಕೈತಪ್ಪಿದ ಸಚಿವ ಸ್ಥಾನ: ಕಾಂಗ್ರೆಸ್ ಕಚೇರಿ ಮುಂದೆ ಬೆಂಬಲಿಗರ ಪ್ರತಿಭಟನೆ

 

ಬೀದರ್, ಜೂ.೧೦- ಶಾಸಕ ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂಖಾನ್ ಅವರ ಬೆಂಬಲಿಗರು ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.

ಕೈಯಲ್ಲಿ ರಹೀಂಖಾನ್ ಅವರ ಭಾವಚಿತ್ರದ ಫಲಕ ಹಿಡಿದು ‘ಬೀದರ್ ಜನತೆಗೆ ನ್ಯಾಯ ಸಿಗಲಿ, ಹಿರಿತನಕ್ಕೆ ಗೌರವ ಕೊಡಿ-ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡಿ, ಬೀದರ್ ಜಿಲ್ಲೆಯನ್ನು ಕಡೆಗಣಿಸಬೇಡಿ’, ‘ನಮಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕೇ ಬೇಕು’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ರಹೀಂಖಾನ್ ಅವರು ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಸಮುದಾಯದ ಹಿರಿಯ ನೇತಾರರಾಗಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಎರಡು ಸಲ ಸಚಿವರಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬೀದರ್ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಹಿತ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರಹೀಂಖಾನ್ ಅವರ ಸೇವೆ ಅವಶ್ಯಕವಾಗಿದೆ ಎಂದು ಮುಖಂಡರು ಹೇಳಿದರು.

ಜನ ಸೇವೆ, ಪಕ್ಷದ ಸಂಘಟನೆ ಬಲವರ್ಧನೆಗೆ ವಹಿಸಿದ ಶ್ರಮ ಹಾಗೂ ಹಿರಿತನವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು. ಮುಖಂಡರಾದ ಬಸವರಾಜ ಬುಯ್ಯಾ, ಕಾಮಶೆಟ್ಟಿ ಘೋಡಂಪಳ್ಳಿ, ಜಾರ್ಜ್ ಫರ್ನಾಂಡೀಸ್, ಡಾ. ಹುಲೆಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜು, ಅಲಿಯಂಬರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಿತೇಶ್ ಭೈರನಳ್ಳೆ, ಧನರಾಜ್ ಚಾಂಬೋಳೆ, ವೈಜಿನಾಥ ಇಸ್ಲಾಂಪುರ, ಶಿವರಾಜ್ ಅಲಿಯಂಬರ್, ಯೇಶಪ್ಪ ಮಮದಾಪುರ, ತಾಜೊದ್ದೀನ್ ಯರನಳ್ಳಿ, ನೀಲಕಂಠ ದೇಸಾಯಿ ಯರನಳ್ಳಿ, ಸಂಜು ಚಿಮಕೋಡ್, ಸೂರ್ಯಕಾಂತ ಪಾಟೀಲ್ ಚಿಮಕೋಡ್, ಯೋಗೇಶ್ ಶ್ರಿಗೆರಿ ನೌಬಾದ್, ಪಂಡಿತ ವಿಳಾಸಪುರ, ಅರ್ಜುನ್ ನಂದಗಾAವ್, ಮಂಜು ಸೋಲಪುರ, ಶಿವರಾಯ ಗೊಂಡ ಅಲಿಯಂಬರ್, ಪರಮೇಶ ಬಂಪಳ್ಳಿ, ವಿಜಯಕುಮಾರ್ ವಿಳಾಸಪುರ, ಮುಹಮ್ಮದ್ ಚಿಲ್ಲರ್ಗಿ, ಸಲಾವುದ್ದೀನ್ ಎಂಜಿನಿಯರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕ್ಷೇತ್ರದ ರಹೀಂಖಾನ್ ಅವರ ಬೆಂಬಲಿಗರು ಭಾಗವಹಿಸಿದ್ದರು.

Share This Article
Leave a Comment