ಕಲಬುರ್ಗಿ, ಜೂ.೫- ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಅಂತರ್ ರಾಜ್ಯದ ಇಬ್ಬರು ಆರೋಪಿಗಳನ್ನು ರಾಘವೇಂದ್ರ ನಗರ ಠಾಣೆಯ ಪೋಲಿಸರು ಬಂಧಿಸಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆಯ ಪ್ರಕರಣದಲ್ಲಿ ಬಿಹಾರ್ ರಾಜ್ಯದ ಶರಣ್ ಜಿಲ್ಲೆಯ, ಅಮ್ಮನೂರ್ ಅಂಚೆಯ ಕೊರಿಪಾಕರ್ ಗೋವಿಂದ್ ಗ್ರಾಮದ ನಿವಾಸಿ ಪ್ರೇಮಶಾಮಕುಮಾರ್ ತಂದೆ ಮೋಹನಸಿಂಗ್ (೩೨) ಹಾಗೂ ಬಿಹಾರ್ ರಾಜ್ಯದ ಶರಣ್ ಜಿಲ್ಲೆಯ ಬನಸಿದಿಲ್ಲಾ ಗ್ರಾಮದ ನಿವಾಸಿ ಗಣೇಶಕುಮಾರಸಿಂಗ್ ತಂದೆ ಜಗನ್ನಾಥಸಿಂಗ್ ಪ್ರಸಾದ್ (೪೦) ಅವರನ್ನು ಬಂಧಿಸಲಾಗಿದೆ. ನಗರದ ಆಜಾದಪೂರ ರಸ್ತೆಯಲ್ಲಿರುವ ಗುತ್ತಿಗೆದಾರ ಅಶರಫ್ ತಂದೆ ಮಹ್ಮದ್ ಸತ್ತಾರ್ (೩೫) ಅವರು ರೈಲ್ವೆ ಇಲಾಖೆ, ಅಂಚೆ ಕಚೇರಿ, ಪೋಲಿಸ್ ಇಲಾಖೆಯಲ್ಲಿ ಕರ್ನಾಟಕ, ಬಿಹಾರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸರ್ಕಾರಿ ನೌಕರಿಯನ್ನು ಒಬ್ಬರಿಗೆ ಐದು ಲಕ್ಷ ರೂ.ಗಳನ್ನು ಕೊಟ್ಟರೆ ನೌಕರಿ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಕುರಿತು ಕಳೆದ ಜೂನ್ ೪ರಂದು ರಾಘವೇಂದ್ರ ನಗರ ಠಾಣೆಗೆ ದೂರು ಸಲ್ಲಿಸಿದ್ದರ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದರು.
ಪಿಐ ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಎಎಸ್ಐ ಮಲ್ಲಿಕಾರ್ಜುನ್ ಜಾನೆ, ಮುಖ್ಯ ಪೇದೆ ಮಲ್ಲನಗೌಡ, ಪೇದೆಗಳಾದ ಉಮೇರ್ಶ, ಶರಣಬಸವ, ಅರೇಶ್, ಪ್ರಶಾಂತ್, ಬಸವರಾಜ್ ಅವರು ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್ಗಳು ಹಾಗೂ ಎಟಿಎಂ, ಫ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಕಾರ್ಯಾಚರಣೆ ಕೈಗೊಂಡ ಎಸಿಪಿ ಶರಣಬಸಪ್ಪ ಸುಬೇದಾರ್ ಅವರೂ ಸೇರಿದಂತೆ ತಂಡಕ್ಕೆ ಪ್ರಶಂಸಾ ಪತ್ರ ನೀಡಿ ಶ್ಲಾಘಿಸಿದರು.