ಮುದ್ದೇಬಿಹಾಳ: ಈಗಾಗಲೇ ಕೆನಾಲ್ಗಳಿಗೆ ನೀರನ್ನು ಬಿಡಲಾಗಿದ್ದು, ಸದ್ಯಕ್ಕೆ ಮತ್ತೆ ಬಂದ್ ಮಾಡಲಾಗಿದೆ. ಮುಂದಿನ 6-7 ದಿನಗಳಲ್ಲಿ ನೀರನ್ನು ಬಿಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗ ಕ್ಷೇತ್ರದಲ್ಲಿನ ಕೆರೆಗಳು ತುಂಬಲು ಅನುಕೂಲವಾಗಲಿದೆ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.ಪಟ್ಟಣದ ಹೂಡೋದಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನು ಕೂಡ ಮೊದಲು ರೈತನಾಗಿ ಹೊಲದಲ್ಲಿ ಕೆಲಸ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿ ಈಗ ರಾಜಕೀಯದಲ್ಲಿ ಇದ್ದೇನೆ. ರೈತರ ಸಮಸ್ಯೆಯನ್ನು ನಾನು ಬಲ್ಲೆನು, ಆದರೆ ಅದರ ನೆಪದಲ್ಲಿ ಕೆಲವರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದರು.
ನಾಗರಬೆಟ್ಟ ಏತ ನೀರಾವರಿ: ಈಗಾಗಲೇ ಸಂಪೂರ್ಣ ಕೆಲಸ ಮುಗಿದಿದೆ. ಒಬ್ಬ ರೈತರ ಅವರವರ ಕುಟುಂಬದ ಸಮಸ್ಯೆಯಿಂದ ಕಾಮಗಾರಿ ನಿಂತಿದೆ. ಅದು ಕೇವಲ15 ದಿನದಷ್ಟು ಕಾಮಗಾರಿ ಉಳಿದಿದ್ದು ಮದುವೆಯ ಸೀಜನ್ ಮುಗಿದ ನಂತರ ಆ ಕುಟುಂಬಸ್ಥರನ್ನು ಕರೆಯಿಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ.
ಮಾಜಿ ಶಾಸಕ ನಡಹಳ್ಳಿಯವರ ಮೇಲೆ ಆರೋಪ:
ಸೋಗಲಿಹಳ್ಳದ ದಂಡೆಯಲ್ಲಿ ಇರುವ ಅವರ ತೋಟದಲ್ಲಿ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಅದು ಕೇವಲ ಸರ್ಕಾರ ಬಡವರಿಗೆ ಮತ್ತು ಕುಡಿಯುವ ನೀರಿನ ಸಲುವಾಗಿ ಇರುವ ಯೋಜನೆ ಅದನ್ನು ಇವರು ಸ್ವಂತ ಕ್ಕೆ ಬಳಸುತ್ತಾರೆ. ಅದು ಕಾನೂನಿನ ಪ್ರಕಾರ ಅಪರಾಧ ಆಗುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ: ನಾನು ಶಾಸಕ ಆದಾಗಿನಿಂದಲೂ ನಮ್ಮ ಕಾರ್ಯಕರ್ತರನ್ನು ರಾಜ್ಯಮಟ್ಟದ ಸ್ಥಾನಮಾನ ನೀಡಬೇಕು ಎಂದು ಹಲವು ಬಾರಿ ಶಿಫಾರಸ್ಸು ಮಾಡಿದ್ದೇನೆ. ಆದರೆ ಅದಕ್ಕೆ ಬೆಲೆ ಇಲ್ಲ ಅಂದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ನಾವು ಶಾಸಕರು ಆದರೂ ಉಪಯೋಗ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಹುಸೇನಬಾಷಾ ಸಾಲಿಮನಿ ಇದ್ದರು.