ಅಫಜಲಪುರ, ಮೇ.10: ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಅವರು ಇತರ ರಾಜಕೀಯ ನಾಯಕರ ಕಾರ್ಯಕರ್ತರನ್ನು “ಚೇಲಾ” ಎಂದು ಕರೆಯುವ ಪದಪ್ರಯೋಗ ಬಳಸಿರುವುದು ಸರಿಯಲ್ಲ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕಾರ್ ಆಕ್ಷೇಪ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಾಲೀಕಯ್ಯಾ ಗುತ್ತೇದಾರರು ಹಿರಿಯ ರಾಜಕಾರಣಿಗಳು. ಅವರಿಂದ ಸುಸಂಸ್ಕೃತ ಭಾಷೆ ನಿರೀಕ್ಷಿಸಲಾಗುತ್ತದೆ.ಕೆಲವು ದಿನಗಳ ಈ ಹಿಂದೆ ಪ್ರಕಾಶ್ ಜಮಾದಾರ ಅವರನ್ನು ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರರು ‘ಚೇಲಾ’ ಎಂದು ಕರೆದಿರುವದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ” ಎಂದು ಹೇಳಿದರು.
ಪ್ರತಿಯೊಂದು ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ನಾಯಕರನ್ನು ಗೌರವಿಸುತ್ತಾರೆ. ಅದಕ್ಕಾಗಿ ಅವರನ್ನು “ಚೇಲಾ” ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ ಅವರು, “ಮಾಜಿ ಸಚಿವರೇ, ನಿಮ್ಮ ಕಾರ್ಯಕರ್ತರನ್ನು ಒಮ್ಮೆ ‘ಚೇಲಾ’ ಎಂದು ಕರೆಯಿರಿ ನೋಡೋಣ” ಎಂದು ಸವಾಲು ಹಾಕಿದರೂ.
ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿವೆ. ಆದರೆ ಮಾಜಿ ಸಚಿವರು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಅವರ ಘನತೆಗೆ ತಕ್ಕದ್ದಲ್ಲ ಎಂದು ಟೀಕಿಸಿದ ನಾಟಿಕಾರ್, ಪ್ರಕಾಶ್ ಜಮಾದಾರ ಅವರ ಬೆಂಬಲಕ್ಕೆ ನಿಂತರು.